ಮುಂದಿನ ವರ್ಷದಿಂದ ಮಾದರ ಚೆನ್ನಯ್ಯ, ಧೂಳಯ್ಯ, ಕಕ್ಕಯ್ಯ, ಹರಳಯ್ಯ, ಉರಿಲಿಂಗಪೆದ್ದಿ ಹೆಸರಲ್ಲಿ ಪ್ರಶಸ್ತಿ : ಶಿವರಾಜ್ ಎಸ್.ತಂಗಡಗಿ
ಬೆಂಗಳೂರು : ಮುಂದಿನ ವರ್ಷದಿಂದ ಐವರು ಶರಣರಾದ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಘೋಷಿಸಿದ್ದಾರೆ.
ಸೋಮವಾರ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಕಾಯಕ ಶರಣರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಐವರು ಶರಣರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಸಂಬಂಧ ಸಮಿತಿಯನ್ನು ರಚಿಸಿ, ಮುಂದಿನ ವರ್ಷದಿಂದ ಪ್ರಶಸ್ತಿ ನೀಡಲಾಗುವುದು. ಬೀದರ್ ನಲ್ಲಿ ದೋಹರ್ ಕಕ್ಕಯ್ಯ ಅವರ ಸ್ಮಾರಕ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರತಿಯೊಂದು ಸಮಾಜದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರುತ್ತವೆ. ಆದರೆ ಅದೆಲ್ಲವನ್ನು ಪಕ್ಕಕ್ಕಿಟ್ಟು ಮುನ್ನಡೆದಾಗ ಸಮಾಜಕ್ಕೆ ಒಳಿತಾಗುತ್ತದೆ. ಒಗ್ಗಟ್ಟಿನಿಂದ ಆಯಾ ಸಮುದಾಯಗಳು ಗಟ್ಟಿಯಾಗುತ್ತವೆ. ಸಂಘಟನೆ ಮತ್ತು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.
ಸಮಾರಂಭದಲ್ಲಿ ಬಸವಹರಳಯ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿದ್ದರು. ಅಖಿಲ ಕರ್ನಾಟಕ ಡೋಹರ ಕಕ್ಕಯ್ಯ ಸಮಾಜದ ಅಧ್ಯಕ್ಷ ಸಂತೋಷ್ ಸುರೇಂದ್ರ ಸವಣೂರು, ಮಾದಿಗ ಸಮುದಾಯದ ಎಂ.ಗುರುಮೂರ್ತಿ, ಆದಿಜಾಂಬವ ಸಮಾಜದ ಕಾರ್ಯಾಧ್ಯಕ್ಷ ಸಿದ್ದರಾಕು, ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.