ಸಿಎಂ ಸಿದ್ದರಾಮಯ್ಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಾಮೆಂಟ್: ದೂರು ದಾಖಲು
ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜು.8: ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯಮಿತ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಭೇಟಿ ನೀಡಿರುವ ಕುರಿತ ಮಾಧ್ಯಮ ವರದಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಹಾಗೂ ಕೆಟ್ಟದಾಗಿ ಕಾಮೆಂಟ್ ಮಾಡಿರು ದುಷ್ಕರ್ಮಿಗಳ ವಿರುದ್ಧ ಇಲ್ಲಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕುಶಾಲ್ ಹರುವೇಗೌಡ ಹಾಗೂ ಸಂಜಯ್ ಎಂಬವರು ದೂರು ನೀಡಿದ್ದು, ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಜು.7ರಂದು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ತೆರಳಿ ನಿಯಮಿತ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು. ಈ ಕುರಿತು ಖಾಸಗಿ ವಾಹಿನಿಯಲ್ಲಿ ಬಿತ್ತರವಾದ ಸುದ್ದಿಯ ಫೇಸ್ಬುಕ್ ಪೋಸ್ಟ್ಗೆ ಮುಖ್ಯಮಂತ್ರಿಯ ಸಾವನ್ನು ಬಯಸಿ ಕಾಮೆಂಟ್ ಮಾಡಿ ವಿಕೃತ ಮೆರದಿದ್ದರು.
ಇಂತಹ ಅಪಪ್ರಚಾರದ ಸುಳ್ಳು ವದಂತಿ ಹಾಗೂ ದಿಕ್ಕು ತಪ್ಪಿಸುವ ಹೇಳಿಕೆಗಳಿಂದ ರಾಜ್ಯದ ಜನರಿಗೆ, ಸಿದ್ದರಾಮಯ್ಯ ರ ಅಭಿಮಾನಿಗಳಿಗೆ ಹಾಗೂ ಲಕ್ಷಾಂತರ ಕಾರ್ಯಕರ್ತರಿಗೆ ತೀವ್ರ ಸ್ವರೂಪದ ನೋವು ಉಂಟಾಗಿರುತ್ತದೆ. ಇದರಿಂದ ಕಾನೂನಿನ ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಹಾಗೂ ಶಾಂತಿ ಕದಡುವ ಇಂತಹ ಕಿಡಿಗೇಡಿಗಳ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.