ಬೆಂಗಳೂರು | ಈಡಿ ಸೋಗಿನಲ್ಲಿ 11 ಕೋಟಿ ರೂ. ವಸೂಲಿ ಪ್ರಕರಣ : ಮೂವರು ಪೊಲೀಸ್ ಬಲೆಗೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ಜಾರಿ ನಿರ್ದೇಶನಾಲಯ(ಈಡಿ) ಅಧಿಕಾರಿಗಳ ಸೋಗಿನಲ್ಲಿ ಸಾಫ್ಟ್ ವೇರ್ ಉದ್ಯೋಗಿಯನ್ನು ಬೆದರಿಸಿ 11 ಕೋಟಿ ರೂ. ವಸೂಲಿ ಮಾಡಿದ್ದ ಆರೋಪದಡಿ ಮೂವರನ್ನು ಬೆಂಗಳೂರು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕರಣ್, ತರುಣ್ ನಟಾನಿ ಹಾಗೂ ಧವಲ್ ಶಾ ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ.
ದೂರುದಾರ ಟೆಕ್ಕಿ ಉದ್ಯೋಗ ಮಾಡುತ್ತಿದ್ದ ಕಂಪೆಯು ತನ್ನ 50 ಲಕ್ಷ ರೂ. ಮೌಲ್ಯದ ಒಂದು ಷೇರನ್ನು ಆತನಿಗೆ ನೀಡಿತ್ತು. ಆ ಷೇರಿನ ಪ್ರಸ್ತುತ ಮೌಲ್ಯ 12 ಕೋಟಿ ರೂ. ಇರುವುದನ್ನು ತಿಳಿದುಕೊಂಡಿದ್ದ ಆರೋಪಿಗಳು, ಪ್ರತ್ಯೇಕ ನಂಬರ್‌ಗಳಿಂದ ಆತನಿಗೆ ಕರೆ ಮಾಡಿ ತಾವು ಈಡಿ, ಕಸ್ಟಮ್ಸ್ ಅಧಿಕಾರಿಗಳೆಂದು ನಂಬಿಸಿದ್ದರು.
ಆನಂತರ, ನಿಮ್ಮ ಖಾತೆಯಲ್ಲಿ ಅಕ್ರಮವಾಗಿ ಹಣದ ವಹಿವಾಟು ನಡೆದಿದೆ. ತನಿಖೆ ನಡೆಸಬೇಕಿದೆ ಎಂದು ಆತನ ಕೆವೈಸಿ ದಾಖಲೆಗಳನ್ನು ಪಡೆದುಕೊಂಡು ಒಟ್ಟು 9 ಖಾತೆಗಳಿಗೆ ಹಣ ವರ್ಗಾಯಿಸಿಕೊಂಡು ಆರೋಪಿಗಳು ನಾಪತ್ತೆಯಾಗಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.