×
Ad

ಬೆಂಗಳೂರು | ಕ್ರಿಪ್ಟೋ ಕಂಪೆನಿಯ ಲ್ಯಾಪ್‍ಟಾಪ್ ಹ್ಯಾಕ್: 378 ಕೋಟಿ ರೂ. ಲೂಟಿ, ಪ್ರಕರಣ ದಾಖಲು

Update: 2025-07-30 18:51 IST
ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ಇಲ್ಲಿನ ಬೆಳ್ಳಂದೂರಿನಲ್ಲಿರುವ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಕಂಪೆನಿ ನೆಬಿಲೋ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‍ನ ವ್ಯಾಲೆಟ್ ಹ್ಯಾಕ್ ಮಾಡಿರುವ ಸೈಬರ್ ವಂಚಕರು, 378 ಕೋಟಿ ರೂ. (44 ಮಿಲಿಯನ್ ಅಮೆರಿಕನ್ ಡಾಲರ್) ಲೂಟಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಕುರಿತು ಕಂಪೆನಿಯ ಸಾರ್ವಜನಿಕ ನೀತಿ ಹಾಗೂ ಸರಕಾರಿ ವ್ಯವಹಾರಗಳ ವಿಭಾಗದ ಉಪಾಧ್ಯಕ್ಷ ಹರ್ದೀಪ್ ಸಿಂಗ್ ಅವರು ನೀಡಿರುವ ದೂರಿನನ್ವಯ ನಗರದ ವೈಟ್‍ಫೀಲ್ಡ್ ಸೈಬರ್ ಕ್ರೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ: ತಮ್ಮ ಉದ್ಯೋಗಿ ರಾಹುಲ್ ಅಗರ್ವಾಲ್ ಎಂಬವರಿಗೆ ಕೆಲಸ ಮಾಡಲು ಕಂಪೆನಿ ಲ್ಯಾಪ್‍ಟಾಪ್ ನೀಡಿತ್ತು. ಸೈಬರ್ ವಂಚಕರು ಈ ಲ್ಯಾಪ್‍ಟಾಪ್‍ನ ವ್ಯಾಲೆಟ್ ಹ್ಯಾಕ್ ಮಾಡಿದ್ದಾರೆ. ದೊಡ್ಡ ಮೊತ್ತ ವಂಚನೆಯಾಗಿರುವುದು ಬೆಳಕಿಗೆ ಬಂದ ತಕ್ಷಣ ಕಂಪೆನಿ ಆಂತರಿಕ ತನಿಖೆ ನಡೆಸಿದೆ. ಈ ವೇಳೆ, ರಾಹುಲ್ ಅಗರ್ವಾಲ್ ಅವರು ಕಂಪೆನಿ ಲ್ಯಾಪ್‍ಟಾಪ್ ಅನ್ನು ಮತ್ತೊಂದು ಪಾರ್ಟ್ ಟೈಂ ಉದ್ಯೋಗಕ್ಕೆ ಬಳಸಿರುವುದು ಗೊತ್ತಾಗಿದೆ ಎಂದು ಕಂಪೆನಿ ದೂರಿನಲ್ಲಿ ತಿಳಿಸಿದೆ.

ಸುಮಾರು ಒಂದು ವರ್ಷದಿಂದ ಪಾರ್ಟ್ ಟೈಂ ಉದ್ಯೋಗದ ಮೂಲಕ ಅಗರ್ವಾಲ್ 15 ಲಕ್ಷ ರೂ. ಸಂಪಾದಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಈತನೇ ಬೇರೆ ವ್ಯಕ್ತಿಗಳೊಂದಿಗೆ ಸೇರಿ ಈ ವಂಚನೆ ಎಸಗಿರುವ ಸಾಧ್ಯತೆ ಇದೆ ಎಂದು ಕಂಪೆನಿ ದೂರಿನಲ್ಲಿ ವಿವರಿಸಿದೆ.

ಉದ್ಯೋಗಿ ವಶಕ್ಕೆ: ನೆಬಿಲೋ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‍ನಲ್ಲಿ ರಾಹುಲ್ ಅಗರ್ವಾಲ್ ಎಂಬಾತ ಐದಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಆತನ ಲ್ಯಾಪ್‍ಟಾಪ್‍ನಿಂದ ಕಂಪೆನಿಯ ಕ್ರಿಪ್ಟೋ ಕರೆನ್ಸಿ ವರ್ಗಾವಣೆಯಾಗಿರುವ ಕಾರಣ ಆತನನ್ನು ವಶಕ್ಕೆ ಪಡೆಯಲಾಗಿದೆ. ಸೈಬರ್ ವಂಚನೆ ಪ್ರಕರಣದಲ್ಲಿ ಆತನ ಕೈವಾಡವಿದೆಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News