×
Ad

ಬೆಂಗಳೂರು | ಪ್ರಿಯಕರನ ಮೇಲೆಯೇ ದರೋಡೆ ಮಾಡಿಸಿದ ಪ್ರಕರಣ : ಯುವತಿ ಸೇರಿ ನಾಲ್ವರ ಬಂಧನ

Update: 2024-09-28 23:00 IST

ಬೆಂಗಳೂರು: ಪ್ರಿಯಕರನ ಮೇಲೆಯೇ ದರೋಡೆ ಮಾಡಿಸಿದ ಪ್ರಕರಣದಡಿ ಯುವತಿ ಸೇರಿ ನಾಲ್ವರನ್ನು ಇಲ್ಲಿನ ಬೆಳ್ಳಂದೂರು ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಶೃತಿ ಎಂಬಾಕೆ ಸೇರಿ ನಾಲ್ವರನ್ನು ಬಂಧಿಸಿ ಕ್ರಮ ಜರುಗಿಸಿರುವುದಾಗಿ ಬೆಳ್ಳಂದೂರು ಠಾಣಾ ಪೊಲೀಸರು ತಿಳಿಸಿದ್ದಾರೆ. ಸೆ.20ರಂದು ಪ್ರಿಯಕರ ವಂಶಿಕೃಷ್ಣರೆಡ್ಡಿ ಎಂಬಾತ ಶೃತಿ ಭೇಟಿಗೆ ತೆರಳಿದ್ದ. ಅದರಂತೆ ಭೇಟಿಯಾಗಿ ಆಕೆಯನ್ನು ಕರೆದುಕೊಂಡು ಹೊರಬರುತ್ತಿದ್ದಂತೆ ಸ್ವಿಫ್ಟ್ ಕಾರಿನಲ್ಲಿ ಬಂದವರು, ವಂಶಿಕೃಷ್ಣನ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.

ಈ ವೇಳೆ ಜಗಳ ತೆಗೆದು ಆತನ ಬಳಿಯಿದ್ದ ಮೊಬೈಲ್ ಕಸಿದುಕೊಂಡಿದ್ದಾರೆ. ಅಲ್ಲದೇ ವಂಶಿಕೃಷ್ಣನ ಜೊತೆಯಲ್ಲಿಯೇ ಇದ್ದ ಶೃತಿಯ ಮೊಬೈಲ್‍ನ್ನು ಸಹ ಕಸಿದುಕೊಂಡಿದ್ದಾರೆ. ನಂತರ ದೂರು ಕೊಡುವುದು ಬೇಡ, ಮೊಬೈಲ್ ಹೋದರೆ ಹೋಗಲಿ ಎಂದು ಪ್ರಿಯತಮೆ ಶೃತಿ, ವಂಶಿ ಮುಂದೆ ಹೇಳಿದ್ದಾಳೆ. ಆದರೂ, ವಂಶಿಕೃಷ್ಣ ಬೆಳ್ಳಂದೂರು ಪೊಲೀಸ್ ಠಾಣೆಗೆ ಕಾರಿನ ನಂಬರ್ ಸಮೇತ ದೂರು ನೀಡಿದ್ದರು. ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರ ವಿಚಾರಣೆ ವೇಳೆ ಶೃತಿಯೇ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಮಾಡಿ ಮೊಬೈಲ್ ಕಸಿದುಕೊಳ್ಳಲಿಕ್ಕೆ ಹೇಳಿದ್ದಳು ಎಂಬುದನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇತ್ತೀಚೆಗೆ ವಂಶಿಕೃಷ್ಣನಿಂದ ದೂರವಾಗಲು ಶೃತಿ ಯತ್ನಿಸುತ್ತಿದ್ದಳು. ಆದರೆ, ವಂಶಿಕೃಷ್ಣನ ಮೊಬೈಲ್‍ನಲ್ಲಿ ಇಬ್ಬರು ಜೊತೆಗಿದ್ದ ಫೊಟೋಗಳಿದ್ದವು. ಈ ಹಿನ್ನಲೆ ಫೊಟೋ, ವಿಡಿಯೋಗಳನ್ನು ಡಿಲೀಟ್ ಮಾಡಿಸುವುದಕ್ಕಾಗಿ ಹಣ ಕೊಟ್ಟು ಮೊಬೈಲ್ ದರೋಡೆ ಮಾಡುವ ಸಂಚು ಮಾಡಿರುವುದು ತನಿಖೆ ಬಳಿಕ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News