×
Ad

ಬೆಂಗಳೂರು | ಪ್ರತ್ಯೇಕ ಪ್ರಕರಣ : ವಿದೇಶಿ ಪ್ರಜೆ ಸೆರೆ, ಲಕ್ಷಾಂತರ ಮೌಲ್ಯದ ಮಾದಕ ವಸ್ತು ಜಪ್ತಿ

Update: 2024-11-26 19:33 IST

ಸಾಂದರ್ಭಿಕ ಚಿತ್ರ(PTI)

ಬೆಂಗಳೂರು : ಮಾದಕ ಪದಾರ್ಥ ಸರಬರಾಜುದಾರರ ವಿರುದ್ಧ ಬೆಂಗಳೂರು ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದು, 3 ಪ್ರತ್ಯೇಕ ಪ್ರಕರಣಗಳಲ್ಲಿ ಓರ್ವ ವಿದೇಶಿ ಪ್ರಜೆಯನ್ನು ಬಂಧಿಸಿ ಒಟ್ಟು 86.50 ಲಕ್ಷ ಮೌಲ್ಯದ ವಿವಿಧ ಮಾದಕ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ.

ಇಲ್ಲಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಆರ್‌ಆರ್‌ ಕಾಲೇಜು ರಸ್ತೆಯಲ್ಲಿ ಎಂಡಿಎಂಎ ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದ ಕೌಸ್ಸಿ ಜೂಲಿಯನ್ಸ್‌ ಗಿಸ್ಸನ್ ಎಂಬಾತನನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹದಳದ ಪೊಲೀಸರು ಬಂಧಿಸಿದ್ದಾರೆ.

2017ರಲ್ಲಿ ವ್ಯಾಪಾರ ಆಧಾರದಡಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಆರೋಪಿ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸುವ ಉದ್ದೇಶದಿಂದ ತನ್ನ ಪರಿಚಯಸ್ಥರಿಂದ ಕಡಿಮೆ ಬೆಲೆಗೆ ಎಂಡಿಎಂಎ ಕ್ರಿಸ್ಟಲ್ ಖರೀದಿಸುತ್ತಿದ್ದ. ನಂತರ ಅವುಗಳನ್ನು ಗ್ರಾಂಗೆ 12 ರಿಂದ 15 ಸಾವಿರದಂತೆ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದ್ದು, ಈತನಿಂದ 515 ಗ್ರಾಂ ಎಂಡಿಎಂಎ ಕ್ರಿಸ್ಟಲ್, ತೂಕದ ಯಂತ್ರ ಮತ್ತು ಮೊಬೈಲ್ ಜಪ್ತಿ ಮಾಡಲಾಗಿದೆ.

ಅದೇ ರೀತಿ, ಮಾರಾಟ ಮಾಡಲು ಗಾಂಜಾ ಸಂಗ್ರಹಿಸಿಟ್ಟಿದ್ದ ವ್ಯಕ್ತಿಯನ್ನು ಮಾರತ್‍ಹಳ್ಳಿ ಠಾಣೆ ಪೊಲೀಸರು ಬಂಧಿಸಿ ಆತನಿಂದ 7.50 ಲಕ್ಷ ಮೌಲ್ಯದ 10 ಕೆ.ಜಿ 370 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಒಟ್ಟು 2 ಲಕ್ಷ ಮೌಲ್ಯದ 4 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News