ಚಲನಚಿತ್ರೋತ್ಸವ ಮುಂದೂಡಲು ಮನವಿ
ಬೆಂಗಳೂರು : ಕರ್ನಾಟಕ ಚಲನಚಿತ್ರ ಅಕಾಡಮಿಯು 16ನೆ ಅಂತರ್‌ರಾಷ್ಟ್ರೀಯ ಬೆಂಗಳೂರು ಚಲನಚಿತ್ರೋತ್ಸವವನ್ನು ಮಾರ್ಚ್ 1ರಿಂದ 8ರ ವರೆಗೂ ನಡೆಸುವುದಾಗಿ ಘೋಷಿಸಿದ್ದು, ಅದೇ ದಿನ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದೆ. ಆದುದರಿಂದ ಎಪ್ರಿಲ್ ವರೆಗೂ ಮುಂದೂಡಬೇಕು ಎಂದು ನಾವು ದ್ರಾವಿಡ ಕನ್ನಡಿಗರು ಚಳವಳಿಯ ಚಂದನ್ ವೈ.ಎಸ್. ಮನವಿ ಮಾಡಿದ್ದಾರೆ.
ಶುಕ್ರವಾರ ನಗರದಲ್ಲಿ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಸಾಧುಕೋಕಿಲಾರಿಗೆ ಮನವಿ ಸಲ್ಲಿಸಿರುವ ಅವರು, ಚಲನಚಿತ್ರೋತ್ಸವ ಮತ್ತು ಅಕಾಡಮಿಯ ಉದ್ದೇಶವೇ ಯುವ ಜನತೆ ಈ ಉತ್ಸವದಿಂದ ವಿಭಿನ್ನ ರೀತಿಯ ಸಿನೆಮಾಗಳನ್ನು ನೋಡಬೇಕು. ಅದರಿಂದ ಸ್ಫೂರ್ತಿ ಪಡೆಯಬೇಕು. ಅಗತ್ಯ ಸಿನೆಮಾ ಶಿಕ್ಷಣ ಪಡೆದು ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ಕೀರ್ತಿ ತರುವ ಕನ್ನಡ ಸಿನೆಮಾ ನಿರ್ಮಾಣಗೊಳ್ಳಬೇಕು ಎಂಬುದಾಗಿತ್ತು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅನೇಕ ಯುವಕರು, ಯುವತಿಯರು ದ್ವಿತೀಯ ಪಿಯುಸಿಯ ನಂತರ ಸಿನೆಮಾ ಶಿಕ್ಷಣದಲ್ಲಿ ಪದವಿ ಓದಬೇಕು ಎಂದುಕೊಂಡಿರುತ್ತಾರೆ. ಅಂತದ್ದರಲ್ಲಿ ಪಿಯುಸಿ ಪರೀಕ್ಷೆ ದಿನವೇ ಚಲನಚಿತ್ರೋತ್ಸವ ಇರುವುದರಿಂದ ಭಾಗವಹಿಸುವುದಾದರು ಹೇಗೆ? ಎಂದು ಪ್ರಶ್ನಿಸಿದ್ದಾರೆ. ಸಿನೆಮಾ ಮೇಲಿರುವ ಸೆಳೆತದಿಂದ ಮುಂದಿನ ದಿನಗಳಲ್ಲಿ ಸಿನೆಮಾದಲ್ಲಿ ಕೆಲಸ ಮಾಡಬೇಕು ಎಂದು ಆಸಕ್ತಿ ಇರುವ ವಿದ್ಯಾರ್ಥಿಗಳು ಪರೀಕ್ಷೆಯನ್ನೆ ತಪ್ಪಿಸಿ ಚಲನಚಿತ್ರೋತ್ಸವಕ್ಕೆ ಹಾಜರಾಗುವ ಸಾಧ್ಯತೆಯು ಇದೆ. ಆದ್ದರಿಂದ ಚಲನಚಿತ್ರೋತ್ಸವವು ಪರೀಕ್ಷೆಯ ನಂತರ ನೆಡೆದರೆ, ಸಿನೆಮಾ ಶಿಕ್ಷಣದಲ್ಲಿ ಪದವಿ ಓದಲು ಆಸಕ್ತಿ ಇರುವ ವಿಧ್ಯಾರ್ಥಿಗಳು ಕೂಡ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುತ್ತಾರೆ. ಆದ್ದರಿಂದ ಚಲನಚಿತ್ರೋತ್ಸವವನ್ನು ಎಪ್ರಿಲ್ ತಿಂಗಳ 2ನೆ ವಾರದಲ್ಲಿ ಆಯೋಜಿಸಬೇಕು ಎಂದು ಮನವಿ ಮಾಡಿದ್ದಾರೆ.