ಬೆಂಗಳೂರು | ವಿಳಾಸ ತಪ್ಪಾಗಿದೆಯೆಂದು ಗ್ರಾಹಕನ ಮೇಲೆ ಹಲ್ಲೆ: ಡೆಲಿವರಿ ಎಕ್ಸಿಕ್ಯುಟಿವ್ ಬಂಧನ
ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ಡೆಲಿವರಿ ಅಡ್ರೆಸ್ ತಪ್ಪಾಗಿದೆ ಎಂದು ಗ್ರಾಹಕನಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿರುವ ಆರೋಪಿಯನ್ನು ಇಲ್ಲಿನ ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಖಾಸಗಿ ಕಂಪೆನಿಯ ಡೆಲಿವರಿ ಎಕ್ಸಿಕ್ಯುಟಿವ್ ವಿಷ್ಣುವರ್ಧನ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಮೇ 21ರಂದು ಜಡ್ಜಸ್ ಕಾಲೋನಿಯಲ್ಲಿ ಶಶಾಂಕ್ ಎಂಬಾತನ ಮೇಲೆ ಆರೋಪಿ ಹಲ್ಲೆ ಎಸಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ಶಶಾಂಕ್ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದೂರುದಾರ ಶಶಾಂಕ್ ಅವರ ಪತ್ನಿ, ಮೇ 21ರಂದು ಇ-ಕಾಮರ್ಸ್ ಅಪ್ಲಿಕೇಶನ್‍ವೊಂದರ ಮೂಲಕ ದಿನಸಿ ಸಾಮಗ್ರಿಗಳನ್ನು ಆರ್ಡರ್ ಮಾಡಿದ್ದರು. ಮಧ್ಯಾಹ್ನ 2 ಗಂಟೆಗೆ ಆರ್ಡರ್ ಡೆಲಿವರಿ ನೀಡಲು ವಿಷ್ಣುವರ್ಧನ್ ಬಂದಿದ್ದ. ಈ ಸಂದರ್ಭದಲ್ಲಿ ಶಶಾಂಕ್ ಅವರ ನಾದಿನಿ ಆರ್ಡರ್ ಪಡೆದುಕೊಳ್ಳಲು ಹೋಗಿದ್ದರು. ಈ ವೇಳೆ ‘ತಪ್ಪಾಗಿ ಅಡ್ರೆಸ್ ನೀಡಿದ್ದೀರಿ' ಎನ್ನುತ್ತಾ ಏರುಧ್ವನಿಯಲ್ಲಿ ಆರೋಪಿ ಅಸಮಾಧಾನ ವ್ಯಕ್ತಪಡಿಸಿದ್ದ ಎಂದು ಶಶಾಂಕ್ ಆರೋಪಿಸಿದ್ದರು.
ಅದೇ ಸಂದರ್ಭದಲ್ಲಿ ಮನೆಯಿಂದ ಹೊರಬಂದು ‘ಯಾಕೆ ಜೋರಾಗಿ ಮಾತನಾಡುತ್ತಿದ್ದೀರಿ, ಹೆಣ್ಣುಮಕ್ಕಳೊಂದಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲವೇ?' ಎಂದು ಪ್ರಶ್ನಿಸಿದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಏಕಾಏಕಿ ಮುಖದ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಶಶಾಂಕ್ ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ಅಲ್ಲದೇ, ಆರೋಪಿಯ ಕೃತ್ಯದಿಂದ ಎಡಗಣ್ಣಿನ ಕೆಳಗೆ ಜೋರಾಗಿ ಪೆಟ್ಟು ಬಿದ್ದಿದ್ದು, ಒಂದು ವಾರದೊಳಗೆ ಸರಿಹೋಗದಿದ್ದರೆ ಸರ್ಜರಿ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಈ ರೀತಿಯ ಕೆಟ್ಟ ಅನುಭವ ಯಾರಿಗೂ ಆಗಬಾರದು ಎಂದು ವಿಡಿಯೋ ಮೂಲಕ ಶಶಾಂಕ್ ತಮ್ಮ ಅಸಮಾಧಾನ ಹೊರ ಹಾಕಿದ್ದರು.