×
Ad

ಬೆಂಗಳೂರು | ಸಾಕುನಾಯಿ ಹತ್ಯೆಗೈದು ಮೃತದೇಹ ಮನೆಯಲ್ಲಿ ಬಚ್ಚಿಟ್ಟ ಮಹಿಳೆ: ಎಫ್‍ಐಆರ್ ದಾಖಲು

Update: 2025-06-29 21:33 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಸಾಕುನಾಯಿಯನ್ನು ಹತ್ಯೆಗೈದು ಕೊಳೆತ ಮೃತದೇಹವನ್ನು ಮನೆಯಲ್ಲಿರಿಸಿದ್ದ ಅಮಾನವೀಯ ಘಟನೆ ಇಲ್ಲಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಪ್ಪ ಬಡಾವಣೆಯ ಆಕ್ಮೆ ಬೆಲ್ಲಿಟ್ ಅಪಾರ್ಟ್ ಮೆಂಟ್‍ನ ಫ್ಲ್ಯಾಟ್‍ವೊಂದರಲ್ಲಿ ಬೆಳಕಿಗೆ ಬಂದಿದೆ.

ಜೂ.27ರಂದು ಸ್ಥಳೀಯರ ಮಾಹಿತಿ ಆಧರಿಸಿ ಬಿಬಿಎಂಪಿ ಪಶು ವಿಭಾಗದ ವೈದ್ಯಾಧಿಕಾರಿಗಳು ಹಾಗೂ ಪೊಲೀಸರು ಮನೆಗೆ ಬಂದು ತಪಾಸಣೆ ನಡೆಸಿದಾಗ ಕೃತ್ಯ ಎಸಗಿರುವುದು ಗೊತ್ತಾಗಿದೆ.

ಈ ಸಂಬಂಧ ಬಿಬಿಎಂಪಿ ಪಶುವೈದ್ಯಾಧಿಕಾರಿ ಡಾ.ರುದ್ರೇಶ್ ಕುಮಾರ್ ನೀಡಿದ ದೂರಿನನ್ವಯ ಕೋಲ್ಕತ್ತಾ ಮೂಲದ ತ್ರಿಪರ್ಣಾಪಾಯಕ್(38) ಎಂಬ ಮಹಿಳೆ ವಿರುದ್ಧ ಮಹದೇವಪುರ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗ ಮುಗಿಸಿದ್ದ ತ್ರಿಪರ್ಣಾಪಾಯಕ್, ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಮನೆಯಲ್ಲಿ ನಾಲ್ಕು ಶ್ವಾನಗಳನ್ನು ಸಾಕಿದ್ದು ಈ ಪೈಕಿ ಒಂದು ಶ್ವಾನವು ಒಂದು ತಿಂಗಳಿಂದ ಕಾಣೆಯಾಗಿದ್ದು, ಉಳಿದ ಮೂರು ಮನೆಯಲ್ಲಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 26ರಂದು ಫ್ಲ್ಯಾಟ್‍ನಿಂದ ದುರ್ವಾಸನೆ ಹರಡಿದ್ದರಿಂದ ಅನುಮಾನ ಬಂದು ಸ್ಥಳೀಯರು ಪ್ರಶ್ನಿಸಿದಾಗ ನಾಯಿ ಸತ್ತುಬಿದ್ದಿರುವ ಬಗ್ಗೆ ವಾಸನೆ ಬರುತ್ತಿದ್ದರೂ ತ್ರಿಪರ್ಣಾ ನಿರಾಕರಿಸಿದ್ದಳು. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರೊಂದಿಗೆ ಜೂ.27ರಂದು ಸ್ಥಳಕ್ಕೆ ಬಂದು ಪರಿಶೀಲನೆ ಮುಂದಾದಾಗ ಮಹಿಳೆಯು ಆಕ್ಷೇಪ ಎತ್ತಿದ್ದಳು.

ಕೆಲಹೊತ್ತು ವಾಗ್ವಾದ ನಡೆಸಿದ ಬಳಿಕ ಒಳಹೊಕ್ಕು ನೋಡಿದಾಗ ಕೊಠಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ನಾಯಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಬೆದರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಠಡಿಯಲ್ಲಿ ಬಚ್ಚಿಟ್ಟಿದ್ದ ನಾಯಿಯ ಮೃತದೇಹದ ಸುತ್ತಮುತ್ತ ದೇವರ ಫೋಟೊಗಳಿದ್ದು, ವಾಮಾಚಾರಕ್ಕಾಗಿ ಸಾಕು ನಾಯಿಯನ್ನು ಹತ್ಯೆಗೈದಿರುವುದಾಗಿ ಸ್ಥಳೀಯರು ದೂರಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿದಾಗ ಕುತ್ತಿಗೆ ಹಾಗೂ ಭುಜದ ಭಾಗದಲ್ಲಿ ಬಲವಾದ ಪೆಟ್ಟುಬಿದ್ದು ಶ್ವಾನ ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ವರದಿ ನೀಡಿದ್ದಾರೆ. ಈ ವರದಿ ಆಧರಿಸಿ ಆರೋಪಿಗೆ ವಿಚಾರಣೆ ಬರುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News