ಬೆಂಗಳೂರು | ಮ್ಯಾನ್‍ಹೋಲ್‍ಗೆ ಇಳಿದು ಕಾರ್ಮಿಕ ಮೃತಪಟ್ಟ ಪ್ರಕರಣ: ನಾಲ್ವರ ಬಂಧನ
ಸಾಂದರ್ಭಿಕ ಚಿತ್ರ | PC : Meta AI
ಬೆಂಗಳೂರು : ಮ್ಯಾನ್‍ಹೋಲ್‍ಗೆ ಇಳಿದು ಸ್ವಚ್ಛಗೊಳಿಸುವಾಗ ಅಸ್ವಸ್ಥನಾಗಿ ಕಾರ್ಮಿಕನೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಇಲ್ಲಿನ ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಮುನಿಸ್ವಾಮಿ (31) ಸಾವನ್ನಪ್ಪಿದ ಕಾರ್ಮಿಕ ಎಂದು ಗುರುತಿಸಲಾಗಿದೆ. ಇವರ ತಂದೆ ಲಕ್ಷ್ಮಣ್ ನೀಡಿದ ದೂರು ಆಧರಿಸಿ ನಾಗರಾಜ್, ಆ್ಯಂಥೋನಿ, ದೇವರಾಜ್ ಹಾಗೂ ಆನಂದ್ ಎಂಬುವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ ವಿವರಿಸಿದ್ದಾರೆ.
ಆರ್‌ಎಂಸಿ ಯಾರ್ಡ್‍ನ ಆಶ್ರಯ ನಗರದಲ್ಲಿ ವಾಸವಾಗಿರುವ ಮುನಿಸ್ವಾಮಿ ಎಂಬುವರನ್ನು ಜೂನ್ 20ರಂದು ಸಂಪರ್ಕಿಸಿ ಹಣದಾಸೆ ತೋರಿಸಿ ಮ್ಯಾನ್‍ಹೋಲ್‍ಗೆ ಇಳಿಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಮಲದ ಗುಂಡಿಗೆ ಇಳಿದು ಸ್ವಚ್ಛಗೊಳಿಸಿ ಹೊರಬಂದಿದ್ದು, ಮನೆಗೆ ಬಂದಾಗ ಉಸಿರಾಟದ ಅಸ್ವಸ್ಥತೆಯಿಂದಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಬಿ.ಎಸ್.ನೇಮಗೌಡ ಮಾಹಿತಿ ನೀಡಿದ್ದಾರೆ.