Bengaluru | ನಟಿ ಕಾವ್ಯಾಗೌಡ ದಂಪತಿ ಮೇಲೆ ಹಲ್ಲೆ ಆರೋಪ: ಸಂಬಂಧಿಕರ ವಿರುದ್ಧ ದೂರು ದಾಖಲು
ಬೆಂಗಳೂರು: ಕುಟುಂಬದ ಸದಸ್ಯರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಕಿರುತೆರೆ ನಟಿ ಕಾವ್ಯಾಗೌಡ ಮತ್ತು ಅವರ ಪತಿ ಸೋಮಶೇಖರ್ ಮೇಲೆ ಹಲ್ಲೆ ನಡೆಸಿರುವ ಆರೋಪದಡಿ ಸಂಬಂಧಿಕರ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜ.26ರ ರಾತ್ರಿ ಘಟನೆ ನಡೆದಿದೆ.
ನಟಿ ಕಾವ್ಯಾಗೌಡ ಅವರ ಪತಿ ಸೋಮಶೇಖರ್ ಮತ್ತು ಅವರ ಸಹೋದರ ನಂದೀಶ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ, ಸೋಮಶೇಖರ್ ಅವರ ಪತ್ನಿ ಕಾವ್ಯಾಗೌಡ ಮತ್ತು ನಂದೀಶ್ ಅವರ ಪತ್ನಿ ಪ್ರೇಮಾ ಮಧ್ಯೆ ಆಗಾಗ ಮನೆಯಲ್ಲಿ ಆಗಾಗ್ಗೆ ಸಣ್ಣಪುಟ್ಟ ಕಾರಣಗಳಿಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇತ್ತೀಚೆಗೆ, ಪ್ರೇಮಾ ಅವರ ಸಂಬಂಧಿಕರು ಮನೆಗೆ ಬಂದಾಗ ವಿವಾದ ಉಂಟಾಗಿದೆ. ಕಾವ್ಯಾಗೌಡ ಅವರ ಜನಪ್ರಿಯತೆಯನ್ನು ಸಹಿಸದ ಪ್ರೇಮಾ ಅವರ ಕುಟುಂಬ ಸದಸ್ಯರು ನಟಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರೇಮಾ ಅವರ ತಂದೆ ರವಿಕುಮಾರ್ ನಟಿ ಕಾವ್ಯಾಗೌಡ ಅವರನ್ನು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ.
ವಿವಾದ ಬಗೆಹರಿಸಲು ಹೋಗಿದ್ದ ನಟಿ ಕಾವ್ಯಾಗೌಡ ಪತಿ ಸೋಮಶೇಖರ್ ಮೇಲೂ ಆರೋಪಿಗಳು ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸದ್ಯ, ಈ ಸಂಬಂಧ ನಟಿಯ ಅಕ್ಕ ಭವ್ಯಾಗೌಡ ನೀಡಿದ ದೂರಿನ ಮೇರೆಗೆ ಪ್ರೇಮಾ, ನಂದೀಶ್, ಪ್ರಿಯಾ ಮತ್ತು ರವಿಕುಮಾರ್ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.