ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕು ಬಿಜೆಪಿ ಕಳೆದುಕೊಂಡಿದೆ: ಡಿ.ಕೆ.ಶಿವಕುಮಾರ್
ಬೆಂಗಳೂರು: ಯೋಜನೆಗಳಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಕೈಬಿಡುವ ಮೂಲಕ ಬಿಜೆಪಿ ನಾಯಕರು ಗಾಂಧಿ ಪ್ರತಿಮೆ ಮುಂದೆ ಕೂತು ಪ್ರತಿಭಟಿಸುವ ಹಕ್ಕು ಕಳೆದುಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೇಂದ್ರ ಸರಕಾರ ಜಾರಿಗೆ ಹೊರಟಿರುವ ವಿಬಿ-ರಾಮ್-ಜಿ ಯೋಜನೆ ರದ್ದು ಹಾಗೂ ಮನರೇಗಾ ಯೋಜನೆ ಮರು ಸ್ಥಾಪಿಸಬೇಕೆಂದು ಆಗ್ರಹಿಸಿ ಮಂಗಳವಾರ ಕೆಪಿಸಿಸಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನಾಯಕರು ಗಾಂಧಿ ಪ್ರತಿಮೆ ಮುಂದೆ ಕೂತು ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂತು. ಆದರೆ, ಅವರು ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಜತೆಗೆ ಬಿಜೆಪಿ ಕಚೇರಿಯಲ್ಲಿ ಗಾಂಧಿ ಭಾವಚಿತ್ರ ಇಟ್ಟುಕೊಳ್ಳುವ ಯೋಗ್ಯತೆ ನಿಮಗಿಲ್ಲ. ಗಾಂಧಿ ಅವರನ್ನು ನಾಥುರಾಮ್ ಗೋಡ್ಸೆ ಹತ್ಯೆ ಮಾಡಿದ್ದಲ್ಲದೇ, ಬಿಜೆಪಿ ಹಾಗೂ ಎನ್ ಡಿಎ ಸರಕಾರ ಈಗ ಮತ್ತೆ ಅವರನ್ನು ಹತ್ಯೆ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ನನ್ನ ಕ್ಷೇತ್ರ ಕನಕಪುರದಲ್ಲಿ ವರ್ಷಕ್ಕೆ 200 ಕೋಟಿ ರೂ. ಅನುದಾನ ಬಳಸಿಕೊಂಡು ಅನೇಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಆ ಮೂಲಕ ಈ ಯೋಜನೆ ಪರಿಣಾಮಕಾರಿ ಜಾರಿಗೊಳಿಸಿದ ತಾಲೂಕಿನಲ್ಲಿ ಅಗ್ರಸ್ಥಾನ ಪಡೆದಿದೆ. ಈ ಯೋಜನೆಯಲ್ಲಿ ಡಿ.ಕೆ.ಶಿವಕುಮಾರ್ ಹಣ ಹೊಡೆದಿದ್ದಾನೆ ಎಂಬ ಅನುಮಾನದ ಮೇಲೆ ಕೇಂದ್ರ ಸರಕಾರ ತನಿಖೆ ಮಾಡಿಸಿತು. ನಂತರ ಅವರೇ ನಮ್ಮ ಕೆಲಸ ನೋಡಿ ಪ್ರಶಸ್ತಿ ನೀಡಿದರು ಎಂದು ಅವರು ಉಲ್ಲೇಖಿಸಿದರು.
ಈ ಕುರಿತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರು ಚರ್ಚೆಗೆ ಬರಲಿ, ನಾನು ಸಿದ್ಧನಿದ್ದೇನೆ. ಈ ಯೋಜನೆ ಜಾರಿಯಾಗಿ 20 ವರ್ಷಗಳಾಗಿವೆ. ಕಳೆದ 11 ವರ್ಷಗಳಿಂದ ನಿಮ್ಮದೇ ಸರಕಾರ ಅಧಿಕಾರದಲ್ಲಿದೆ. ಈ ಯೋಜನೆಯಲ್ಲಿ ಅಕ್ರಮ ನಡೆದಿದ್ದರೆ ನೀವು ಏನು ಮಾಡುತ್ತಿದ್ದಿರಿ? ನಮ್ಮ ಪಂಚಾಯಿತಿಗಳಲ್ಲಿ ಅಕ್ರಮ ನಡೆದ ಪ್ರಕರಣಗಳಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ. ಯಾರೋ ಕೆಲವರು ತಪ್ಪು ಮಾಡಿದರೆ ಇಡೀ ಯೋಜನೆಯನ್ನೇ ಬದಲಿಸುವುದೇ? ಆ ಮೂಲಕ ಮೂಗು ಕತ್ತರಿಸಿಕೊಳ್ಳುವ ಕೆಲಸ ಮಾಡುವುದು ಸರಿಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಬಿಜೆಪಿ ಸರಕಾರ ನರೇಗಾ ಯೋಜನೆ ಅನುದಾನವನ್ನು ಬಾಕಿ ಉಳಿಸಿಕೊಂಡಿದೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಕೇಂದ್ರ ಸರಕಾರದ ನೂತನ ಯೋಜನೆ ಅನುಷ್ಠಾನ ಸಾಧ್ಯವಿಲ್ಲ. ಎನ್‍ಡಿಎ ಮೈತ್ರಿ ನಾಯಕ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಈ ಯೋಜನೆಗೆ ಅಪಸ್ವರ ಎತ್ತಿದ್ದು, ಇದನ್ನು ಜಾರಿ ಸಾಧ್ಯವಿಲ್ಲ ಎಂದಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ನೂತನ ಕಾಯ್ದೆ ಹಿಂಪಡೆಯದಿದ್ದರೆ ಸರಕಾರಕ್ಕೆ ಆಪತ್ತು ಎದುರಾಗಲಿದೆ. ಚಂದ್ರಬಾಬು ನಾಯ್ಡು ಅವರು ಎಚ್ಚರಿಕೆ ಗಂಟೆ ರವಾನಿಸಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿಯಲ್ಲಿ ಮನರೇಗಾ ಕಾರ್ಮಿಕರನ್ನು ಒಳಗೊಂಡು ತಾಲೂಕು ಮಟ್ಟದಲ್ಲಿ 5 ಕಿಮೀ ಪಾದಯಾತ್ರೆ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಪರಿಷತ್ ಸದಸ್ಯರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಬೇಕಿದೆ ಎಂದು ತಿಳಿಸಿದರು.