×
Ad

ಬಿಇಎಂಎಲ್‍ನಲ್ಲಿ ಕನ್ನಡ ಸಂಘವನ್ನು ಮುಂದುವರಿಸಿ: ಡಾ. ಪುರುಷೋತ್ತಮ ಬಿಳಿಮಲೆ

Update: 2026-01-28 00:39 IST

ಬೆಂಗಳೂರು: ಕೇಂದ್ರ ಸ್ವಾಮ್ಯದ ಭಾರತ್ ಅರ್ಥ್ ಮೂವರ್ಸ್ ಲಿ.ನ ಬೆಂಗಳೂರು ಸಂಕೀರ್ಣದಲ್ಲಿ ಕಾರ್ಮಿಕರ ಕನ್ನಡ ಸಂಘವು ನಿಷ್ಕ್ರಿಯಗೊಂಡಿದ್ದು, ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಪ್ರಥಮ ಪ್ರಾತಿನಿಧ್ಯವನ್ನು ಕಲ್ಪಿಸುವ ಉದ್ದೇಶದಿಂದ ಕೂಡಲೇ ಸಂಘವನ್ನು ಮುಂದುವರಿಕೆಗೆ ಆಡಳಿತ ಮಂಡಳಿ ಅವಕಾಶ ಕಲ್ಪಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ಮಂಗಳವಾರ ಬಿಇಎಂಎಲ್‍ನ ಕೇಂದ್ರ ಕಚೇರಿಯಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕ ಸಂಸ್ಥೆಗಳಲ್ಲಿ, ವಿಶೇಷವಾಗಿ ಕೇಂದ್ರಸ್ವಾಮ್ಯದ ಉದ್ದಿಮೆಗಳಲ್ಲಿ ಕನ್ನಡ ಕಾರ್ಮಿಕರ ಸಂಖ್ಯೆ ಅನೇಕ ಕಾರಣಗಳಿಗಾಗಿ ಕ್ಷೀಣಿಸುತ್ತಿದ್ದು, ಭಾಷಾ ಹಕ್ಕುಗಳ ಸಮರ್ಪಕ ಪ್ರತಿಪಾದನೆಗೆ ಕನ್ನಡ ಸಂಘಗಳ ಅಗತ್ಯ ಹೆಚ್ಚಿರುತ್ತದೆ. ಅಂತಹ ಸಂದರ್ಭದಲ್ಲಿ ಕಳೆದ ಒಂದು ವರ್ಷದಿಂದ ಬಿಇಎಂಎಲ್‍ನ ಬೆಂಗಳೂರು ಸಂಕೀರ್ಣದಲ್ಲಿ ಕನ್ನಡ ಸಂಘ ಕಾರ್ಯ ನಿರ್ವಹಿಸದೇ ಇರುವ ಪರಿಸ್ಥಿತಿ ಸೃಷ್ಠಿಯಾಗಿರುವುದು ಕನ್ನಡದ ಹಿತದೃಷ್ಠಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.

ಜಾಗತೀಕರಣದ ಪರಿಣಾಮವಾಗಿ ಮಾರುಕಟ್ಟೆ ಭಾಷೆಯು ಪ್ರಭಾವಶಾಲಿಯಾಗಿರುವ ಕಾರಣ ಸ್ಥಳೀಯ ಭಾಷೆಗಳು ನೇಪಥ್ಯಕ್ಕೆ ಸರಿಯುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಸಂಸ್ಥೆಗಳು ಸ್ಥಳೀಯ ಭಾಷೆಗಳನ್ನು ಗೌರವಿಸುವ ವಾತಾವರಣ ಸೃಷ್ಠಿಸುವ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದು, ಸ್ಥಳೀಯ ಭಾಷಾ ಸಂಸ್ಕೃತಿಯನ್ನು ಪೋಷಿಸುವ ಭಾಷೆ ಸಂಘಗಳು ಅವನತಿ ಹೊಂದಿದರೆ ವೃತ್ತಿಪರ ವಾತಾವರಣದಲ್ಲಿ ಸ್ಥಳೀಯ ಭಾಷೆಯ ಪರಿಸ್ಥಿತಿ ಭೀಕರವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಂಡವಾಳಶಾಹಿ ಸಂಸ್ಕೃತಿ ಪ್ರಬಲವಾದಾಗ ಸರಕಾರಗಳು ಕೈಚೆಲ್ಲಬೇಕಾಗುತ್ತದೆ. ಭಾಷಾಂಧತೆಯ ಹೊರತಾಗಿಯೂ ಇಂತಹ ಸಂದರ್ಭದಲ್ಲಿ ಭಾರತದ ಭಾಷೆಗಳ ಗತಿ ಏನಾಗಬಹುದೆಂಬ ಆತಂಕವು ನೀತಿ-ನಿರೂಪಕರನ್ನು ಕಾಡಬೇಕಾದ ಸಂದರ್ಭ ಇದಾಗಿದೆ ಎಂದರು.

ಬಹಳ ದಿನಗಳ ನಂತರ ಬಿಇಎಂಎಲ್ ಸಂಸ್ಥೆಯುಸಿ ‘ಸಿ’ ವೃಂದದ ನೌಕರರ ನೇಮಕಾತಿಗೆ ಚಾಲನೆಯನ್ನು ನೀಡುತ್ತಿದ್ದು, ನೇಮಕಾತಿ ಅಧಿಸೂಚನೆಯನ್ನು ಕನ್ನಡದಲ್ಲಿಯೂ ಪ್ರಕಟಿಸುವುದಲ್ಲದೇ, ನೇಮಕಾತಿಯಲ್ಲಿ ಸ್ಥಳೀಯ ಕನ್ನಡಿಗರಿಗೆ ಆದ್ಯತೆಯನ್ನು ನೀಡಬೇಕು ಎಂದು ಸೂಚಿಸಿದರು.

ಯಾವುದೇ ಸಂಸ್ಥೆಯ ಯಶಸ್ಸು ಸ್ಥಳೀಯ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಲ್ಲಿದೆ. ಸ್ಥಳೀಯ ಭಾಷೆ ಸಂಸ್ಕೃತಿಗಳನ್ನು ಗೌರವಿಸುವುದನ್ನು ಸಾರ್ವಜನಿಕ ಸಂಸ್ಥೆಗಳು ರೂಢಿಸಿಕೊಂಡಲ್ಲಿ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಜನಮಾನಸದಲ್ಲಿ ಉಳಿಯುತ್ತವೆ ಎಂದು ಅಭಿಪ್ರಾಯಪಟ್ಟರು.

ಟೆನ್ಯೂರ್ ಆಧಾರಿತ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡಿಗರಿಗೆ ಅವಕಾಶ ನೀಡುವುದು, ಹೊರಗುತ್ತಿಗೆ ನೇಮಕಾತಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯವನ್ನು ಕಲ್ಪಿಸುವುದು, ಬಿಇಎಂಎಲ್‍ನ ವಾರ್ತಾ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಎಲ್ಲ ಮಾಹಿತಿಗಳು ಕನ್ನಡದಲ್ಲಿಯೂ ಇರುವ ಹಾಗೆ ನೋಡಿಕೊಳ್ಳಬೇಕು. ಬಿಇಎಂಎಲ್‍ನ ಉತ್ಪನ್ನಗಳ ಜ್ಞಾನ ಹಾಗೂ ಅಳವಡಿಸಿಕೊಂಡಿರುವ ತಾಂತ್ರಿಕತೆಗಳು ಕನ್ನಡಿಗರಿಗೆ ತಲುಪಲು ಈ ಸಂಬಂಧದ ಕಿರುಹೊತ್ತಿಗೆಗಳನ್ನು ಪ್ರಕಟಿಸಿ ಶಿಕ್ಷಣ ಸಂಸ್ಥೆಗಳಿಗೆ ಪೂರೈಸಿ ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಬಿಇಎಂಎಲ್‍ನ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ದೇಬಿ ಪ್ರಸಾದ ಸತ್ಪತಿ, ಕಾರ್ಯನಿರ್ವಾಹಕ ನಿರ್ದೇಶಕ ಎಂ.ಜಿ.ಜಿ.ರಾಜು, ಎಜಿಎಂ ಮಹಾಲಕ್ಷಮ್ಮ, ಬಿಇಎಂಎಲ್ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಎಂ.ಶ್ಯಾಮಸುಂದರ ರಾವ್, ಕನ್ನಡ ಜಾಗೃತಿ ಸಮಿತಿ ಸದಸ್ಯ ಸು.ಜಗದೀಶ್, ಬಾ.ಹಾ.ಶೇಖರಪ್ಪ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News