ಟ್ಯಾಂಕರ್ ನೀರಿನ ದರಕ್ಕೆ ಮಿತಿ ನಿಗದಿಗೊಳಿಸಲು ಸಿಎಂಗೆ ಮನವಿ
ಬೆಂಗಳೂರು: ‘ರಾಜ್ಯದಲ್ಲಿನ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಶುದ್ಧ ಕುಡಿಯುವ ನೀರಿನ ಫಿಲ್ಟರ್‌ಗಳು ಹಾಗೂ ನೀರಿನ ಕ್ಯಾನ್‌ಗಳು ಮತ್ತು ಬಾಟಲಿಗಳ ಮೇಲಿನ ಎಸ್‌ಜಿಎಸ್‌ಟಿ ಕಡಿತಕ್ಕೆ ಅಗತ್ಯ ಯೋಜನೆ ರೂಪಿಸಬೇಕು. ಜಿಎಸ್‌ಟಿ ಕೌನ್ಸಿಲ್ ಮುಂದೆ ಸಂಪೂರ್ಣ ತೆರಿಗೆ ವಿನಾಯಿತಿ ಬೇಡಿಕೆ ಇಡಬೇಕು’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಸ್.ಎ.ಹುಸೇನ್ ಮನವಿ ಮಾಡಿದ್ದಾರೆ.
ಸೋಮವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಹುಸೇನ್, ‘ಬರಗಾಲದ ಅವಧಿಗೆ ಟ್ಯಾಂಕರ್ ನೀರಿನ ದರಕ್ಕೆ ಮಿತಿ ನಿಗದಿಪಡಿಸಬೇಕು. ಪ್ರತೀ ವಾರ್ಡ್ ಗರಿಷ್ಠ ದರವನ್ನು ಸರಕಾರವೇ ಪ್ರಕಟಿಸಬೇಕು. ಜನರ ನೀರಿನ ದಾಹವನ್ನು ಯಾರೂ ವ್ಯಾಪಾರ ಸರಕನ್ನಾಗಿ ಮಾಡಿಕೊಳ್ಳದಂತೆ ನಿಯಂತ್ರಣ ಇರಬೇಕು’ ಎಂದು ಕೋರಿದ್ದಾರೆ.
‘ನಗರದ ಎಲ್ಲ ಕುಡಿಯುವ ನೀರಿನ ಮೂಲಗಳ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿ, ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತುರ್ತಾಗಿ ದುರಸ್ತಿ ಮಾಡಬೇಕು. ಪ್ಯೂರಿಫೈಯರ್ ಖರೀದಿಸಲು ಸಾಧ್ಯವಾಗದ ಬಡ-ಮಧ್ಯಮ ವರ್ಗದ ಕುಟುಂಬಗಳಿಗೂ ಮನೆಗಳ ಸಮೀಪವೇ ಸುರಕ್ಷಿತ ಕುಡಿಯುವ ನೀರು ದೊರೆಯುವ ವ್ಯವಸ್ಥೆ ಕಲ್ಪಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.