ಬೆಂಗಳೂರು : ತಮ್ಮ ಸರಕಾರದ ನೂರನೇ ದಿನದ ಸಂದರ್ಭದಲ್ಲಿ ಘೋಷಿಸಲಾದ ಯೋಜನೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ತ್ವರಿತ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾ ದಲ್ಲಿ ಸಭೆ ನಡೆಸಿದ ಅವರು, ಕೃಷಿ, ಜವಳಿ, ಸಕ್ಕರೆ, ತೋಟಾಗಾರಿಗೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಪಶು ಸಂಗೋಪನೆ, ಗಣಿ ಮತ್ತು ಭೂ ವಿಜ್ಞಾನ, ಸಣ್ಣ ಕೈಗಾರಿಕೆ, ವಾಣಿಜ್ಯ ಮತ್ತು ಕೈಗಾರಿಕೆ, ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಮುಖ್ಯಮಂತ್ರಿ ರೈತ ಚೈತನ್ಯ ಅಗ್ರಿಟೆಕ್ ಮಿಷನ್ ಯೋಜನೆ ವಿಚಾರವಾಗಿ ರೈತರಿಗೆ 25 ಲಕ್ಷ ಎಸ್‍ಎಂಎಸ್ ಕಳುಹಿಸಲಾಗಿದೆ. ಇದರ ಜೊತೆ ರೈತರಿಗೆ ಸುಲಭವಾಗಿ ಅರ್ಥವಾಗುವಂತೆ ವಿಡಿಯೊ ಸಂದೇಶ ಕಳುಹಿಸಲು ಸೂಚಿಸಲಾಯಿತು. ಮಾರ್ಚ್ 2027ರ ಅಂತ್ಯದೊಳಗೆ 2000 ರೈತರಿಗೆ ರಫ್ತುದಾರರಾಗಲು ತರಬೇತಿ, ಪ್ರಮಾಣೀಕರಣದ ಬಗ್ಗೆ ಮಾರ್ಗದರ್ಶನ ನೀಡಿ ಸಿದ್ಧಗೊಳಿಸುವ ಗುರಿ ಹೊಂದಲಾಗಿದ್ದು, ಈ ಸಂಬಂಧ ಕಾರ್ಯ ಚಟುವಟಿಕೆಗಳಿಗೆ ಚುರುಕುಮುಟ್ಟಿಸಲು ಸೂಚಿಸಲಾಯಿತು.

ಉದ್ಯೋಗ ನಿಧಿ ಯೋಜನೆಗೆ ಈಗಾಗಲೇ ಸರಕಾರಿ ಆದೇಶ ಹೊರಡಿಸಲಾಗಿದ್ದು, ಅತ್ಯಂತ ಹಿಂದುಳಿದ 11 ಜಿಲ್ಲೆಗಳ ಉದ್ಯೋಗದಾತರಿಗೆ ಪ್ರತಿ ಹೊಸ ಕಾರ್ಮಿಕರ ಲೆಕ್ಕದಲ್ಲಿ ಮಾಸಿಕ 2500 ರೂ. ನಂತೆ ಎರಡು ವರ್ಷದವರೆಗೆ ಪ್ರೋ ತ್ಸಾಹ ಧನ ನೀಡುವಂತೆ ಸೂಚಿಸಲಾಗಿದೆ. ಇತ್ತ ಜವಳಿ ನೀತಿ ಸಂಬಂಧ 20 ಸಾವಿರ ಕೋಟಿ ರೂ. ಹೂಡಿಕೆ ಹಾಗೂ 5 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ. ರೇಷ್ಮೆ ಯನ್ನು ಜವಳಿ ನೀತಿ ವ್ಯಾಪ್ತಿಗೆ ತರಲಾಗಿದೆ. ಕಲಬುರ್ಗಿ ಪಿಎಂ ಮಿತ್ರ ಜವಳಿ ಪಾರ್ಕ್ ಉದ್ಘಾಟನೆಗೆ ದಿನಾಂಕ ನಿಗದಿ ಪಡಿಸಲು ಸೂಚನೆ ನೀಡಲಾಗಿದ್ದು, 2821 ಕೋಟಿ ರೂ. ಮೊತ್ತದ 15 ಯೋಜನಾ ಒಪ್ಪಂದಗಳಿಗೆ ಸಹಿ ಮಾಡಲಾಗಿದೆ ಎಂದರು.

100 ದಿನಗಳಲ್ಲಿ 25,000 ಕೋಟಿ ರೂ. ಹೂಡಿಕೆ ಗುರಿ ಹೊಂದಲಾಗಿತ್ತು. ಈಗಾಗಲೇ 43,214 ಕೋಟಿ ರೂ. ಮೌಲ್ಯದ 150 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. 2027 ರ ಮಾರ್ಚ್ ತಿಂಗಳ ವರೆಗೆ 50,000 ಕೋಟಿ ರೂ. ಹೂಡಿಕೆ ಗುರಿ ಹೊಂದಲಾಗಿದೆ. 200 ಕೈಗಾರಿಕೆಗಳಿಂದ 1 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಇದೆ. ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆಗೆ ಹೂಡಿಕೆ ಉತ್ತೇಜನ ಪ್ಯಾಕೇಜ್ ಕುರಿತು ಸರಕಾರಿ ಆದೇಶ ಹೊರಡಿಸಲಾಗಿದ್ದು, ವರ್ಷಕ್ಕೆ 200 ಕೋಟಿ ರೂ. ಸಹಾಯಧನ ನೀಡಲಾಗುವುದು. ಆ ಮೂಲಕ ಹಿಂದುಳಿದ ಪ್ರದೇಶಗಳಲ್ಲಿ ಸುಮಾರು ಸಾವಿರ ಕೋಟಿ ಹೂಡಿಕೆ ಹಾಗೂ 50,000 ಉದ್ಯೋಗ ಸೃಷ್ಟಿಯ ಗುರಿ ಹೊಂದಿದೆ. ಇವುಗಳ ಅನುಷ್ಠಾನಕ್ಕೆ ವೇಳಾಪಟ್ಟಿ ನಿಗದಿ ಪಡಿಸಲು ಸೂಚನೆ ನೀಡಲಾಯಿತು.

ದ್ವೀಪ ಪ್ರವಾಸೋದ್ಯಮ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಲಾಗಿದ್ದು, ಶೀಘ್ರವೇ ಟೆಂಡರ್ ಕರೆಯಲು ಸೂಚನೆ ನೀಡಿದರು. ತೇಗದ ಸಿರಿ ಯೋಜನೆಗೆ ಸರಕಾರಿ ಆದೇಶ ಹೊರಡಿಸಲಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ರಸ್ತೆ ಬದಿಗಳಲ್ಲಿ 10 ಕೋಟಿ ತೇಗ ಮತ್ತು ಇತರ ಬೆಲೆಬಾಳುವ ಜಾತಿಯ ಸಸಿಗಳನ್ನು ನೆಡುವುದು. ರಸ್ತೆ ಬದಿಗೆ ಹೊಂದಿಕೊಂಡಿರುವ ಜಮೀನಿನ ರೈತರಿಂದ ಈ ಮರಗಳ ಪೋಷಣೆ. ಕಟಾವಿನ ಆದಾಯದಲ್ಲಿ ರೈತರಿಗೆ ಶೇ.70 ರಷ್ಟು ಪಾಲು ನೀಡಲಾಗುವುದು. ಈ ಯೋಜನೆ ಜಾರಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ರಚನೆ ಮಾಡಿ, ತೇಗದ ಸಸಿ ನೆಡುವ ಸ್ಥಳ ಹಾಗೂ ರೈತರನ್ನು ಗುರುತಿಸಲು ಕ್ರಮಕ್ಕೆ ಸೂಚಿಸಿದರು.

ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಕೃಷ್ಣ ಭೈರೇಗೌಡ ಪ್ರಿಯಾಂಕ್ ಖರ್ಗೆ, ಭೈರತಿ ಸುರೇಶ್, ಸಿಎಂ ಸಲಹೆಗಾರ ಜಿ.ಸಿ.ಚಂದ್ರಶೇಖರ್, ಸಿಎಂ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಡಾ.ಎಂ.ಮಹೇಶ್ವರರಾವ್, ಸುಸ್ಥಿರತೆ, ಉದ್ಯೋಗ ಮತ್ತು ಬೆಳವಣಿಗೆ ಸಂಸ್ಥೆ ನಿರ್ದೇಶಕ ಡಾ.ಸಿರೀಶ್ ಸಂಖೆ ಸೇರಿದಂತೆ ಪ್ರಮುಖರಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor