ಬೆಂಗಳೂರು : ಯುನಾನಿ ವೈದ್ಯ ಪದ್ಧತಿಯ ಬೋಧನೆ ಮತ್ತು ಸಂಶೋಧನೆಯನ್ನು ಸಮಕಾಲೀನ ವೈಜ್ಞಾನಿಕ ಜ್ಞಾನದೊಂದಿಗೆ ಸಮನ್ವಯಗೊಳಿಸುವ ಅಗತ್ಯವಿದೆ ಎಂದು ಬೆಂಗಳೂರಿನ ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆ(ಎನ್‌ಐಯುಎಂ) ನಿರ್ದೇಶಕ ಪ್ರೊ. ಸಯ್ಯದ್ ಶಾ ಆಲಮ್ ಹೇಳಿದ್ದಾರೆ.

ಸೋಮವಾರ ನಗರದ ಮಾಗಡಿ ರಸ್ತೆಯಲ್ಲಿರುವ ಎನ್‌ಐಯುಎಂ ಸೆಮಿನಾರ್ ಹಾಲ್‌ನಲ್ಲಿ ಕುಲ್ಲಿಯಾತ್-ಎ-ತಿಬ್ ವಿಭಾಗದ ವತಿಯಿಂದ ಶಿಕ್ಷಕರಿಗಾಗಿ ಆಯೋಜಿಸಿರುವ ‘ಸಮಕಾಲೀನ ವೈಜ್ಞಾನಿಕ ಜ್ಞಾನದ ಬೆಳಕಿನಲ್ಲಿ ಕುಲ್ಲಿಯಾತ್-ಎ-ತಿಬ್‌ನ ಸಮಗ್ರ ತಿಳುವಳಿಕೆ’ ಎಂಬ ವಿಷಯದ ಆರು ದಿನಗಳ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯುನಾನಿ ವೈದ್ಯ ಪದ್ಧತಿಯ ಬೌದ್ಧಿಕ ಮತ್ತು ತಾತ್ವಿಕ ತಳಹದಿಯಾಗಿರುವ ಕುಲ್ಲಿಯಾತ್-ಎ-ತಿಬ್ ಗೆ ವಿಶಿಷ್ಟ ಸ್ಥಾನವಿದೆ. ನಮ್ಮ ಪ್ರಾಚೀನ ವಿದ್ವಾಂಸರು ತಾರ್ಕಿಕ ಚಿಂತನೆ, ಅನುಭವ ಹಾಗೂ ಆರೋಗ್ಯ ಮತ್ತು ರೋಗಗಳ ಸಮಗ್ರ ತಿಳುವಳಿಕೆಯ ಆಧಾರದ ಮೇಲೆ ಮಹತ್ವದ ಜ್ಞಾನ ಪರಂಪರೆಯನ್ನು ರೂಪಿಸಿದ್ದಾರೆ ಎಂದು ಅವರು ಹೇಳಿದರು.

ವೈದ್ಯಕೀಯ ಶಿಕ್ಷಣವು ಆಧುನಿಕ ವಿಜ್ಞಾನ, ಸಂಶೋಧನಾ ವಿಧಾನಗಳು, ತಂತ್ರಜ್ಞಾನ ಮತ್ತು ಬೋಧನಾ ಪದ್ಧತಿಗಳಲ್ಲಿನ ನಿರಂತರ ಬೆಳವಣಿಗೆಯೊಂದಿಗೆ ಬದಲಾಗುತ್ತಿದೆ. ಈ ಆರು ದಿನಗಳ ಸಿಎಂಇ ಕಾರ್ಯಕ್ರಮವು ಶಿಕ್ಷಕರು ಮತ್ತು ಅಧ್ಯಾಪಕರಿಗೆ ಕುಲ್ಲಿಯಾತ್-ಎ-ತಿಬ್‌ನ ಪರಿಕಲ್ಪನೆಗಳ ಕುರಿತು ಹೆಚ್ಚಿನ ಸ್ಪಷ್ಟತೆ, ಹೊಸ ಬೋಧನಾ ವಿಧಾನಗಳು ಹಾಗೂ ಸಂಶೋಧನೆಗೆ ಹೊಸ ದೃಷ್ಟಿಕೋನಗಳನ್ನು ನೀಡಲಿದೆ ಎಂದು ಸಯ್ಯದ್ ಶಾ ಆಲಮ್ ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹೊಸದಿಲ್ಲಿಯ ಜಾಮಿಯಾ ಹಮ್ದರ್ದ್ ವಿಶ್ವವಿದ್ಯಾನಿಲಯದ ಯುನಾನಿ ಮೆಡಿಸನ್ ಸೆಂಟರ್ ಆಫ್ ಎಕ್ಸಲೆನ್ಸ್ ನಿರ್ದೇಶಕ ಪ್ರೊ.ಸಯೀದ್ ಅಹ್ಮದ್ ಮಾತನಾಡಿ, ಕುಲ್ಲಿಯಾತ್-ಎ-ತಿಬ್ ಎಂದರೆ ಯುನಾನಿ ವೈದ್ಯ ಪದ್ಧತಿಯ ಮೂಲಭೂತ ಸಿದ್ಧಾಂತಗಳು, ತಾತ್ವಿಕ ಚಿಂತನೆಗಳು ಮತ್ತು ವೈದ್ಯಕೀಯ ಜ್ಞಾನಕ್ಕೆ ಆಧಾರವಾಗಿರುವ ಸಾಮಾನ್ಯ ತತ್ವಗಳ ಸಮಗ್ರ ಅಧ್ಯಯನ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್‌ಐಯುಎಂ ಕುಲ್ಲಿಯಾತ್-ಎ-ತಿಬ್ ವಿಭಾಗದ ಮುಖ್ಯಸ್ಥ ಡಾ.ವಸೀಮ್ ಅಹ್ಮದ್, ಯುನಾನಿ ವೈದ್ಯಕೀಯ ಪದ್ಧತಿಯನ್ನು ಒಂದು ವಿಶಾಲವಾದ ಮರವೆಂದು ಪರಿಗಣಿಸಿದರೆ, ಕುಲ್ಲಿಯಾತ್-ಎ-ತಿಬ್ ಅದರ ಆಳವಾದ ಬೇರು ಆಗಿದೆ. ಬೇರುಗಳು ಕಣ್ಣಿಗೆ ಕಾಣದಿದ್ದರೂ ಇಡೀ ಮರಕ್ಕೆ ಪೋಷಣೆ ನೀಡುವಂತೆ, ಕುಲ್ಲಿಯಾತ್‌ನ ದೃಢವಾದ ಅರಿವು ಯುನಾನಿ ವೈದ್ಯಕೀಯ ಪದ್ಧತಿಯನ್ನು ಪೋಷಿಸುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮ ನಿರೂಪಿಸಿದ ಪಿಜಿ ಸ್ಕಾಲರ್ ಡಾ.ಮುಹಮ್ಮದ್ ಶುಐಬ್ ಅವರು ಉರ್ದು ಭಾಷೆಗೆ ತರ್ಜುಮೆ ಮಾಡಿರುವ ‘ಮಸಾಲಿಹ್ ಅಲ್ ಅಬ್ದನ್ ವ ಅಲ್ ಅನ್ಫುಸ್’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಹಾಯಕ ಪ್ರಾಧ್ಯಾಪಕ ಡಾ.ಅಬ್ದುಲ್ ಮಲಿಕ್ ವಂದನಾರ್ಪಣೆ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor