‘ಸಿಎಂ ಕಪ್’ ಕಿರೀಟಕ್ಕೆ ಮುತ್ತಿಟ್ಟ ದಯಾನಂದ್ ಸಾಗರ್ ಕಾಲೇಜು; ಚಾಂಪಿಯನ್ ಪಟ್ಟಕ್ಕೇರಿದ ಯುವ ಪಡೆ
ಬೆಂಗಳೂರು : ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ ‘ಸಿಎಂ ಕಪ್’ನ ಕಿರೀಟವನ್ನು ದಯಾನಂದ್ ಸಾಗರ್ ಕಾಲೇಜು ವಿದ್ಯಾರ್ಥಿಗಳು ಮುಡಿಗೇರಿಸಿಕೊಂಡಿದ್ದಾರೆ.
ಸಪ್ತಗಿರಿ ಎನ್‌ಪಿಎಸ್ ಯುನಿವರ್ಸಿಟಿ ಮತ್ತು ಡಾನ್ ಬಾಸ್ಕೋ ಕಾಲೇಜು ತಂಡದ ವಿದ್ಯಾರ್ಥಿಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದಿದ್ದಾರೆ. ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ನೇತೃತ್ವದಲ್ಲಿ ನಡೆದ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಪ್ರಥಮ 1ಲಕ್ಷ ರೂ., ದ್ವಿತೀಯ 75 ಸಾವಿರ ರೂ. ಹಾಗೂ ತೃತೀಯ 50 ಸಾವಿರ ರೂ.ನಗದು ಸಹಿತ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು.
ಅಲ್ಲದೆ, ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರಿಗೆ ಅತ್ಯುತ್ತಮ ಬ್ಯಾಟ್ಸ್‌ಮನ್, ಅತ್ಯುತ್ತಮ ಬೌಲರ್ ಹಾಗೂ ಅತ್ಯುತ್ತಮ ಆಲ್ ರೌಂಡರ್ ಪದಕಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಅಲ್ಲದೆ, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ವಾರ್ಡ್ ಹಂತದಲ್ಲಿ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ನಂದಿನಿ ಲೇಔಟ್ ವಾರ್ಡ್ ಹಾಗೂ ನಾಗಪುರ ವಾರ್ಡ್ ತಂಡಗಳಿಗೆ ಆಕರ್ಷಕ ಟ್ರೋಫಿ ನೀಡಿ ಅಭಿನಂದಿಸಲಾಯಿತು.
ಬಹುಮಾನ ವಿತರಿಸಿ ಮಾತನಾಡಿದ ಮಂಜುನಾಥ್ ಗೌಡ, ‘ಕ್ರೀಡೆ ಕೇವಲ ಗೆಲುವು-ಸೋಲಿನ ಸ್ಪರ್ಧೆಯಲ್ಲ, ಅದು ಶಿಸ್ತು, ಪರಿಶ್ರಮ, ತಂಡದ ಮನೋಭಾವ ಮತ್ತು ನಾಯಕತ್ವದಂತಹ ಜೀವನ ಮೌಲ್ಯಗಳನ್ನು ಕಲಿಸುವ ವೇದಿಕೆ. ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿದ ‘ಸಿಎಂ ಕಪ್’ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯೂ ಅಭಿನಂದನೆಗೆ ಅರ್ಹರು ಎಂದು ತಿಳಿಸಿದರು.
ಈ ವೇಳೆ ಬಿಬಿಎಂಪಿ ಮಾಜಿ ಸದಸ್ಯ ಎಸ್.ಕೇಶವಮೂರ್ತಿ, ಮುಖಂಡರಾದ ರವಿ, ಶ್ರೀಧರ್ ಜಾಧವ್, ದೀಪಕ್ ಗೌಡ ಪಿ., ಭರತ್ ಯಾದವ್ ಜೆ., ಅನಿಲ್ ಕುಮಾರ್, ಹನೀಫ್ ಖುರೇಷಿ, ಸ್ಯಾಮ್ಯುಯೆಲ್, ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಜರಿದ್ದರು.