×
Ad

ಬೆಂಗಳೂರು| ಲಂಚ ಸ್ವೀಕಾರ: ಕೆಂಪೇಗೌಡ ನಗರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್, ಸಬ್ ಇನ್ ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ

Update: 2025-05-06 12:36 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ಪ್ರಕರಣವೊಂದರಲ್ಲಿ ಆರೋಪಿಯ ಹೆಸರು ಕೈಬಿಡಲು ಲಂಚ ಪಡೆಯುತ್ತಿದ್ದ ಆರೋಪದಲ್ಲಿ ನಗರದ ಕೆಂಪೇಗೌಡ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಮತ್ತು ಸಬ್ ಇನ್ ಸ್ಪೆಕ್ಟರ್ ರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಪಿಐ ಶಿವಾಜಿ ರಾವ್ ಮತ್ತು ಪಿಎಸ್ಸೈ ಶಿವಾನಂದ ಜಿ. ಬಂಧಿತ ಪೊಲೀಸ್ ಅಧಿಕಾರಿಗಳು.

ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಆರೋಪಿಗಳ ಪರವಾಗಿ ವರದಿ ಸಲ್ಲಿಸಲು ಒಂದು ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಡಿವೈಎಸ್ಪಿ ಗಿರೀಶ್ ನೇತೃತ್ವದ ಸಿಬ್ಬಂದಿ ಆರೋಪಿ ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದ್ದಾರೆ.

ಆವಲಹಳ್ಳಿ ನಿವಾಸಿ ಕೇಶವಮೂರ್ತಿ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರಲ್ಲಿ, ಅವರ ಹೆಸರು ಕೈಬಿಡಲು ಪಿಐ ಶಿವಾಜಿ ರಾವ್ ಮತ್ತು ಪಿಎಸ್ಸೈ ಶಿವಾನಂದ ಜಿ. ಆರು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಈ ಸಂಬಂಧ ಕೇಶವಮೂರ್ತಿಯವರು ಲೋಕಾಯಕ್ತ ಪೊಲೀಸರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರ ಸೂಚನೆಯಂತೆ ಕೇಶವಮೂರ್ತಿ ಕೆಂಪೇಗೌಡ ನಗರ ಪೊಲೀಸ್ ಠಾಣೆಯ ಬಳಿಯಲ್ಲೇ ಪಿಐ ಮತ್ತು ಪಿಎಸ್ಸೈಗೆ ಒಂದು ಲಕ್ಷ ರೂ. ನೀಡಿದ್ದರು.

ಈ ವೇಳೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ಲಂಚದ ಒಂದು ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News