×
Ad

ಬೆಂಗಳೂರು | ಮಾಂಸಕ್ಕಾಗಿ ಜಿಂಕೆ, ಹಂದಿಗಳ ಕೊಲ್ಲುತ್ತಿದ್ದ ಓರ್ವನ ಸೆರೆ; ಮೂವರಿಗೆ ಶೋಧ

Update: 2025-06-29 20:59 IST

ಬೆಂಗಳೂರು : ಬೆಂಗಳೂರು ನಗರ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡವು ಬನ್ನೇರುಘಟ್ಟ ರಸ್ತೆಯಲ್ಲಿ ರವಿವಾರ ಕಾರ್ಯಾಚರಣೆ ನಡೆಸಿ, ಮಾಂಸಕ್ಕಾಗಿ ಜಿಂಕೆ ಹತ್ಯೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಒಟ್ಟು 9 ಜಿಂಕೆ ಹಾಗೂ ಒಂದು ಕಾಡು ಹಂದಿಯ ಸುಮಾರು 74 ಕೆ.ಜಿ. ಜಿಂಕೆ ಮಾಂಸ, 2 ಕಾರು, ಒಂದು ದ್ವಿಚಕ್ರ ವಾಹನ ಹಾಗೂ 2 ಬಂದೂಕುಗಳನ್ನು ಜಪ್ತಿ ಮಾಡಿದ್ದಾರೆ.

ಪ್ರತಾಪ್(31) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಕೋಲಾರ, ಬನ್ನೇರುಘಟ್ಟ ಅರಣ್ಯದಲ್ಲಿ ಜಿಂಕೆಗಳನ್ನು ಕೊಂದು ಮಾಂಸ ಮಾರಾಟ ಮಾಡಲಾಗುದೆ ಎಂಬ ಖಚಿತ ಮಾಹಿತಿ ಆಧರಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಸೂಚನೆ ಮೇರೆಗೆ ಕಾರ್ಯಾಚರಣೆ ಕೈಗೊಂಡ ಅರಣ್ಯ ಅಧಿಕಾರಿಗಳು ಮತ್ತು ಜಾಗೃತ ದಳದ ಜಂಟಿ ತಂಡ ಬನ್ನೇರುಘಟ್ಟದ ನೈಸ್ ರಸ್ತೆ ಜಂಕ್ಷನ್ ಬಳಿ  ಕಾರನ್ನು ತಡೆದು ತಪಾಸಣೆ ನಡೆಸಿದಾಗ, ಕಾರಿನಲ್ಲಿ 4 ಸತ್ತ ಚುಕ್ಕೆ ಜಿಂಕೆ ಮತ್ತು ಒಂದು ಮೃತ ಕಾಡು ಹಂದಿ ಮೃತದೇಹವನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ.

ಬಂಧಿತ ಆರೋಪಿಯ ವಿಚಾರಣೆ ವೇಳೆ ಸಿ.ಕೆ.ಪಾಳ್ಯದ ಶೆಡ್‍ನಲ್ಲಿ ಮತ್ತಷ್ಟು ಜಿಂಕೆಗಳ ಮೃತದೇಹ ಮತ್ತು ಮಾಂಸವಿರುವ ವಿಷಯ ತಿಳಿದು, ಅಧಿಕಾರಿಗಳು ದಾಳಿ ಮಾಡಿ, ದ್ವಿಚಕ್ರ ವಾಹನ ಮತ್ತು ಮತ್ತೊಂದು ಇಂಡಿಕಾ ಕಾರನ್ನೂ ವಶಪಡಿಸಿಕೊಂಡು ಒಟ್ಟು 9 ಜಿಂಕೆ ಹಾಗೂ ಒಂದು ಕಾಡು ಹಂದಿಯ ಸುಮಾರು 74 ಕೆ.ಜಿ. ಜಿಂಕೆ ಮಾಂಸ, 1 ಡಬಲ್ ಬ್ಯಾರೆಲ್ ಗನ್, 1 ಸಿಂಗಲ್ ಬ್ಯಾರೆಲ್ ಗನ್  ವಶಕ್ಕೆ ಪಡೆದಿದ್ದಾರೆ.

ಜಿಂಕೆ ಮಾಂಸ ಇಟ್ಟಿದ್ದ ಶೆಡ್ ಮಾಲಕ ಭೀಮಪ್ಪ, ಆರೋಪಿಗಳಾದ ಬಾಲರಾಜು ಹಾಗೂ ರಮೇಶ್ ಎಂಬುವವರು ನಾಪತ್ತೆಯಾಗಿದ್ದು, ಇವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ತಿಳಿಸಿದ್ದಾರೆ.

ಸಚಿವರ ಅಭಿನಂದನೆ: ಮಾಹಿತಿ ದೊರೆತ ಕೂಡಲೇ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿ ಜಿಂಕೆ ಹಂತಕರ ಜಾಲ ಭೇದಿಸಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ಅವರ ತಂಡವನ್ನು ಸಚಿವ ಈಶ್ವರ್ ಖಂಡ್ರೆ ಅಭಿನಂದಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News