ಬೆಂಗಳೂರು | ವಾಕಿಂಗ್ ತೆರಳಿದ್ದ ವೇಳೆ ಆನೆ ದಾಳಿ: ವ್ಯಕ್ತಿ ಮೃತ್ಯು
ಪ್ರಾತಿನಿಧಿಕ ಚಿತ್ರ
ಬೆಂಗಳೂರು, ಸೆ.28: ಇಂದು ಮುಂಜಾವ ವಾಕಿಂಗ್ ತೆರಳಿದ್ದ ವ್ಯಕ್ತಿಯೊಬ್ಬರು ಆನೆ ದಾಳಿಯಿಂದ ಮೃತಪಟ್ಟಿರುವ ಘಟನೆ ಕೆಂಗೇರಿ ಸಮೀಪದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ(ಆರ್.ಆರ್ ವೈದ್ಯಕೀಯ ಕಾಲೇಜು) ಬಳಿಯಿರುವ ಅಂಚೆಪಾಳ್ಯ ಗ್ರಾಮದ ಬಳಿ ನಡೆದಿದೆ.
ಅಂಚೆಪಾಳ್ಯ ಗ್ರಾಮದ ನಿವಾಸಿ ನಾಗರಾಜ್ ಎಂಬವರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಅವರು ಇಂದು ಮುಂಜಾವ 5 ಗಂಟೆ ಸುಮಾರಿಗೆ ವಾಕಿಂಗ್ ತೆರಳಿದ್ದರು. ಈ ವೇಳೆ ಅವರ ಮೇಲೆ ಆನೆ ದಾಳಿ ನಡೆಸಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ದುರ್ಘಟನೆ ಸಂಭವಿಸಿದ ಸ್ಥಳದಲ್ಲಿ ಕಾಂಪೌಂಡ್ ಗೋಡೆಗಳು ಉರುಳಿಬಿದ್ದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೃತದೇಹ ಪತ್ತೆಯಾದ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಆನೆ ದಾಳಿಯಿಂದಲೇ ಮೃತಪಟ್ಟಿದ್ದಾರೆಯೇ ಅಥವಾ ಸಾವಿಗೆ ಬೇರೆ ಕಾರಣ ಇದೆಯೇ ಎಂದು ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ.