×
Ad

ಬೆಂಗಳೂರು: ಅನುಮಾನಾಸ್ಪದ ವಸ್ತು ಸ್ಫೋಟ; ಬಾಲಕ ಮೃತ್ಯು, ಹಲವರು ಗಂಭೀರ

Update: 2025-08-15 11:55 IST

ಬೆಂಗಳೂರು, ಆ.15:  ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಓರ್ವ ಬಾಲಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಯ್ಯನಪಾಳ್ಯದ ಶ್ರೀರಾಮ ಕಾಲನಿಯಲ್ಲಿ ನಡೆದಿದೆ.

ಗಂಭೀರ ಗಾಯಗೊಂಡಿದ್ದ ಮುಬಾರಕ್ (8) ಮೃತ ಬಾಲಕ.  ಕಸ್ತೂರಮ್ಮ(35), ಸರಸಮ್ಮ(50), ಶಬ್ರೀನಾ ಬಾನು(35), ಸುಬ್ರಮಣಿ(62), ಶೇಖ್ ನಜೀದುಲ್ಲಾ(37), ಫಾತಿಮಾ (8),ಕಯಾಲ್‌ (8) ಸೇರಿ ಹಲವರಿಗೆ ಗಾಯಗಳಾಗಿದ್ದು, ಕೆಲವರನ್ನು ಸಮೀಪದ ಸಂಜಯ್​ ಗಾಂಧಿ ಮತ್ತು ಜಯನಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗಾಯಾಳು ಕಸ್ತೂರಿಯ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಕಸ್ತೂರಿ ಅವರ 8 ವರ್ಷದ ಕಯಾಲ್ ಎಂಬ ಹೆಣ್ಣು ಮಗುವಿಗೆ ವಿಕ್ಟೋರಿಯಾ ಬರ್ನಿಂಗ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಮುಬಾರಕ್ ಬಾಲಕನ ಪಕ್ಕದ ಮನೆಯಲ್ಲಿ ಕಸ್ತೂರಿ ವಾಸವಿದ್ದರು.

ಸ್ಫೋಟದ ತೀವ್ರತೆಗೆ ಮೊದಲನೇ ಮಹಡಿಯ ಮನೆ ಗೋಡೆ ಛಾವಣಿ ಕುಸಿದು ಬಿದ್ದಿದೆ. 8ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ. ಆಡುಗೋಡಿ ಠಾಣೆ ಪೊಲೀಸರು ಘಟನಾ ಸ್ಥಳ ಭೇಟಿ ನೀಡಿ ಪರಿಶೀಲಿಸಿದ್ದು ಮೇಲ್ನೋಟಕ್ಕೆ ಸಿಲಿಂಡರ್ ಸ್ಟೋಟ ಸಂಭವಿಸಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಸಾಕಷ್ಟು ಜನರು ಬೆಳಗ್ಗೆಯೇ ಲಾಲ್​ ಬಾಗ್​ನಲ್ಲಿ ಉದ್ಯಾನವನ ನಿರ್ವಹಣೆ ಕೆಲಸಕ್ಕೆ ಹೋಗುತ್ತಾರೆ. ಒಂದು ವೇಳೆ ಇಂದು ಕೆಲಸಕ್ಕೆ ಹೋಗದೆ ಇದ್ದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಸಿಲಿಂಡರ್ ಸ್ಪೋಟ ಆಗಿರುವ ಸಾಧ್ಯತೆ ಕಡಿಮೆ ಎಂದು ಕೆಲ ಸ್ಥಳೀಯರು ಹೇಳುತ್ತಿದ್ದು, ತುಂಬಾ ದೊಡ್ಡ ಸ್ಪೋಟ ಆಗಿದೆ ಎನ್ನಲಾಗುತ್ತಿದೆ. ಕೆಲವರ ಕೈ ಮತ್ತು ತಲೆಗೆ ಭಾರೀ ಪೆಟ್ಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸದ್ಯ ಸ್ಫೋಟಗೊಂಡಿರುವ ಮನೆ ಸುತ್ತ ಮುತ್ತಲಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪೊಲೀಸರ ಮಾಹಿತಿ ಆಧರಿಸಿ ಹೆಚ್ಚಿನ ತನಿಖೆ: ಸೀಮಂತ್ ಕುಮಾರ್ ಸಿಂಗ್

ಘಟನಾ ಸ್ಥಳಕ್ಕೆ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ‘ಘಟನಾ ಸ್ಥಳಕ್ಕೆ ಸೋಕೋ ಟೀಮ್, ಎಫ್‍ಎಸ್‍ಎಲ್ ತಂಡಗಳು ತಪಾಸಣೆ ನಡೆಸಿವೆ. ಈ ಅವಾಂತರಕ್ಕೆ ಕಾರಣವೇನು ಎಂಬುದರ ಬಗ್ಗೆ ಪರಿಶೀಲನೆ ಕೈಗೊಂಡಿದ್ದು, ಸ್ಫೋಟಗೊಂಡಿರುವ ಮನೆಯನ್ನು ತೆರವು ಮಾಡಲಾಗುತ್ತಿದೆ. ನಮ್ಮ ಪೊಲೀಸ್ ತಾಂತ್ರಿಕ ತಂಡ ನೀಡುವ ಮಾಹಿತಿ ಆಧರಿಸಿ ಹೆಚ್ಚಿನ ತನಿಖೆ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News