×
Ad

ಬೆಟ್ಟಿಂಗ್ ಪ್ರಕರಣ : ಕೆ.ಸಿ.ವೀರೇಂದ್ರಗೆ ಸಂಬಂಧಿಸಿದ 177.3 ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿಕೊಂಡ ಈಡಿ

Update: 2026-01-30 14:01 IST

ಕೆ.ಸಿ. ವೀರೇಂದ್ರ

ಬೆಂಗಳೂರು: ಕೆ.ಸಿ. ವೀರೇಂದ್ರ ಮತ್ತು ಅವರ ಸಹಚರರು ನಡೆಸುತ್ತಿದ್ದರೆಂದು ಆರೋಪಿಸಲಾದ ಆನ್‌ಲೈನ್ ಅಕ್ರಮ ಬೆಟ್ಟಿಂಗ್ ಹಾಗೂ ಜೂಜಾಟ ಜಾಲಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ (ಈಡಿ) ಬೆಂಗಳೂರು ವಲಯ ಕಚೇರಿ ಅಧಿಕಾರಿಗಳು ಸುಮಾರು 177.3 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಜ.29ರಂದು ಪಿಎಂಎಲ್‌ಎ ಕಾಯ್ದೆ–2002ರ ನಿಬಂಧನೆಗಳ ಅಡಿ ಈ ಮುಟ್ಟುಗೋಲು ಕ್ರಮ ಕೈಗೊಳ್ಳಲಾಗಿದೆ ಎಂದು ಈಡಿ ಮೂಲಗಳು ತಿಳಿಸಿವೆ.

ಈಇಡಿ ನೀಡಿರುವ ಮಾಹಿತಿಯಂತೆ, ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ಕೃಷಿ ಭೂಮಿಗಳು, ವಸತಿ ನಿವೇಶನಗಳು ಸೇರಿದ್ದು, ಇವುಗಳನ್ನು ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಹಾಗೂ ಜೂಜಾಟದಿಂದ ಗಳಿಸಿದ ಹಣ ಬಳಸಿ ಸಂಪಾದಿಸಲಾಗಿದೆ ಎಂಬುದು ತನಿಖೆಯಿಂದ ದೃಢಪಟ್ಟಿದೆ.

ಬಹು ಎಫ್‌ಐಆರ್‌ಗಳ ಆಧಾರದ ಮೇಲೆ ತನಿಖೆ :

ದೇಶದ ವಿವಿಧ ರಾಜ್ಯಗಳಲ್ಲಿ ಪೊಲೀಸ್ ಇಲಾಖೆ ದಾಖಲಿಸಿದ ಬಹು ಎಫ್‌ಐಆರ್‌ಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ದಾಖಲಾಗಿರುವ ಈ ಪ್ರಕರಣಗಳನ್ನು ಪಿಎಂಎಲ್‌ಎ ಕಾಯ್ದೆಯ ಅಡಿ ನಿಗದಿತ ಅಪರಾಧಗಳಾಗಿ ಪರಿಗಣಿಸಿ, ಈಡಿ ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದೆ.

ತನಿಖೆಯಲ್ಲಿ, ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ಗೆ ಸಂಬಂಧಿಸಿದ ವೆಬ್‌ಸೈಟ್‌ಗಳು ಸೇರಿದಂತೆ ಹಲವು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಅಕ್ರಮ ಬೆಟ್ಟಿಂಗ್ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು ಎಂಬುದು ಪತ್ತೆಯಾಗಿದೆ. ಕೆ.ಸಿ. ವೀರೇಂದ್ರ ಮತ್ತು ಅವರ ಸಹಚರರು ಇದೇ ರೀತಿಯ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿ ರಾಷ್ಟ್ರವ್ಯಾಪಿ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಜಾಲವನ್ನು ನಿರ್ವಹಿಸುತ್ತಿದ್ದರು ಎಂದು ಈಡಿ ತಿಳಿಸಿದೆ.

ಶೋಧ, ಬಂಧನ ಮತ್ತು ಆಸ್ತಿ ಮುಟ್ಟುಗೋಲು :

ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಮುನ್ನ, ಪಿಎಂಎಲ್‌ಎ ಸೆಕ್ಷನ್ 17ರ ಅಡಿ ಈಡಿ ಅಧಿಕಾರಿಗಳು ಹಲವಾರು ರಾಜ್ಯಗಳಲ್ಲಿ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು, ನಗದು ಹಣ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಎಲ್ಲ ಪುರಾವೆಗಳು ಸಂಗ್ರಹವಾದ ಬಳಿಕ ಕೆ.ಸಿ. ವೀರೇಂದ್ರ ಅವರನ್ನು ಪಿಎಂಎಲ್‌ಎ ಸೆಕ್ಷನ್ 19ರ ಅಡಿ ಬಂಧಿಸಲಾಗಿದೆ. ಪಿಎಂಎಲ್‌ಎ ಪ್ರಕರಣಗಳ ವಿಚಾರಣೆಗೆ ನಿಗದಿತ ವಿಶೇಷ ನ್ಯಾಯಾಲಯದ ಮುಂದೆ ದೂರು ಕೂಡ ದಾಖಲಿಸಲಾಗಿದೆ ಎಂದು ಈಡಿ ತಿಳಿಸಿದೆ.

ಈಡಿ ತನ್ನ ಇತ್ತೀಚಿನ ಮಾಧ್ಯಮ ಪ್ರಕಟಣೆಯಲ್ಲಿ, ಇದುವರೆಗೆ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಒಟ್ಟು ಮೌಲ್ಯ 320 ಕೋಟಿ ರೂ.ಗಳನ್ನು ಮೀರಿದೆ ಎಂದು ಮಾಹಿತಿ ನೀಡಿದೆ. ತನಿಖೆಯ ಅವಧಿಯಲ್ಲಿ 2,300 ಕೋಟಿ ರೂ.ಗಳಿಗಿಂತ ಹೆಚ್ಚಿನ ಅಕ್ರಮ ಹಣಕಾಸು ವ್ಯವಹಾರಗಳು ನಡೆದಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣದ ಸಂಬಂಧ ತನಿಖೆ ಮುಂದುವರಿದಿದ್ದು, ಸಂಗ್ರಹಿಸಲಾದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಾರಿ ನಿರ್ದೇಶನಾಲಯ ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News