ಚಲನಚಿತ್ರೋತ್ಸವದಲ್ಲಿ ‘ಫೆಲೆಸ್ತೀನ್’ ಸಿನೆಮಾಗಳಿಗೆ ನಿರ್ಬಂಧ ವಿಚಾರ: ಕವಿತೆ ವಾಚಿಸುವ ಮೂಲಕ ನಟ ಪ್ರಕಾಶ್ ರಾಜ್ ಪ್ರತಿರೋಧ
ಬೆಂಗಳೂರು: ಹದಿನೇಳನೆಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಫೆಲೆಸ್ತೀನ್ ದೇಶದ ಸಿನೆಮಾಗಳಿಗೆ ನಿರ್ಬಂಧ ಹೇರಿರುವುದಕ್ಕೆ ಕಾರ್ಯಕ್ರಮದ ವೇದಿಕೆಯಲ್ಲಿಯೇ ತೀವ್ರ ಬೇಸರ ವ್ಯಕ್ತಪಡಿಸಿದ ಚಲನಚಿತ್ರೋತ್ಸವ ರಾಯಭಾರಿಯೂ ಆದ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು, ಫೆಲೆಸ್ತೀನ್ ಕವಿತೆ ವಾಚಿಸುವ ಮೂಲಕ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು.
ಗುರುವಾರ ವಿಧಾನಸೌಧದ ಮುಂಭಾಗದ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 17ನೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
16 ವರ್ಷದ ಹಿಂದೆಯೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವನ್ನು ಉದ್ಘಾಟನೆ ಮಾಡಿದ್ದೆ. ಅಂದಿನಿಂದ ಇದುವರೆಗೂ ಸಿನೆಮಾ ಕ್ಷೇತ್ರದ ವಿವಿಧ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ. ಆದರೆ, ಇತ್ತೀಚಿಗೆ ಚಲನಚಿತ್ರಗಳು ರಾಜಕೀಯ ಬಲೆಗೆ ಸಿಲುಕಿವೆ. ಅದರಲ್ಲೂ ಕೇಂದ್ರ ಸರಕಾರ ಫೆಲೆಸ್ತೀನ್ ದೇಶದ ಸಿನೆಮಾಗಳಿಗೆ ನಿರ್ಬಂಧಿಸಿರುವುದು ಅತ್ಯಂತ ನೋವಿನ ಸಂಗತಿ ಎಂದು ಪ್ರಕಾಶ್ ರಾಜ್ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕವು ಶಾಂತಿಯ ತೋಟಕ್ಕೆ ಹೆಸರು ಮಾಡಿದೆ. ಇಲ್ಲಿನ ರಂಗನತಿಟ್ಟು, ವಿಜಯನಗರದ ಅಂಕ ಸಮುದ್ರಕ್ಕೆ ದೇಶ, ವಿದೇಶಗಳಿಂದ ಹಕ್ಕಿಗಳು ಬರುವಂತೆ ನಾವು ಸಹ ಬೇರೆ ದೇಶಗಳ ಸಿನೆಮಾ, ಭಾವನೆಗಳಿಗೆ ಸ್ಪಂದಿಸಬೇಕು. ನಮ್ಮದೇ ಕತೆಗಳಿಗೆ ಬೂಕರ್ ಪ್ರಶಸ್ತಿ ಸಿಕ್ಕಿದಾಗ ಸಂಭ್ರಮಿಸುವ ನಾವು, ಬೇರೆ ಸಿನೆಮಾಗಳಿಗೆ ವಿರೋಧ ಏಕೆ ಎಂದ ಅವರು, ರಾಜ್ಯ ಸರಕಾರ ಕೇರಳ ಮಾದರಿಯಲ್ಲಿಯೇ ಗಟ್ಟಿ ನಿಲುವು ತೆಗೆದುಕೊಂಡು ಫೆಲೆಸ್ತೀನ್ ದೇಶದ ಸಿನೆಮಾಗಳ ಮೇಲಿನ ನಿರ್ಬಂಧ ತೆಗೆಯಲು ಮುಂದಾಗಬೇಕು ಎಂದು ಪ್ರಕಾಶ್ ರಾಜ್ ಆಗ್ರಹಿಸಿದರು.
ಪ್ರಕಾಶ್ ರಾಜ್ ವಾಚಿಸಿದ ‘ಫೆಲೆಸ್ತೀನ್’ ಕವಿತೆ: ‘ಯುದ್ಧಗಳು ಕೊನೆಗೊಳ್ಳುತ್ತವೆ. ನಾಯಕರು ಕೈ ಕುಲುಕಿ ಹೊರಟು ಹೋಗುತ್ತಾರೆ. ಆದರೆ ಎಲ್ಲೋ, ವಯಸ್ಸಾದ ತಾಯಿ ಇನ್ನೂ ತನ್ನ ಮಗನಿಗಾಗಿ ಕಾಯುತ್ತಾಳೆ, ಹೆಂಡತಿ ತನ್ನ ಗಂಡನಿಗಾಗಿ ಕಾಯುತ್ತಾಳೆ ಮತ್ತು ಮಕ್ಕಳು ತಮ್ಮ ತಂದೆಗಾಗಿ ಕಾಯುತ್ತಾರೆ. ಅದು ಸತ್ಯ. ಈ ಭೂಮಿಯನ್ನು ಯಾರು ತ್ಯಜಿಸಿದರು ಎಂಬುದು ನಮಗೆ ತಿಳಿದಿಲ್ಲದಿರಬಹುದು, ಆದರೆ ಅದಕ್ಕೆ ಯಾರು ಬೆಲೆ ತೆರುತ್ತಿದ್ದಾರೆಂದು ನಮಗೆ ತಿಳಿದಿದೆ ಎಂದು 17ನೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಈ ಕವಿತೆಯನ್ನು ಪ್ರಕಾಶ್ ರಾಜ್ ವಾಚಿಸಿದರು.