ಗೌರಿ ಲಂಕೇಶ್ ಅವರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು ‘ಲ್ಯಾಂಡ್‍ಲಾರ್ಡ್’ ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್
‘ನಾವೆಲ್ಲ ಗೌರಿ’ ಕಾರ್ಯಕ್ರಮ
ಬೆಂಗಳೂರು: ‘ಹೋರಾಟವನ್ನು ಯಾರೂ ನಿಲ್ಲಿಸಲಿಕ್ಕೆ ಆಗುವುದಿಲ್ಲ, ಅದನ್ನು ನಿಲ್ಲಿಸುವುದೂ ಇಲ್ಲ. ನಾನು ಇಲ್ಲ ಎಂದರೆ ಇನ್ನೊಬ್ಬರು, ಇನ್ನೊಬ್ಬರು ಇಲ್ಲ ಎಂದರೆ ಮತ್ತೊಬ್ಬರು ಬರುತ್ತಾ ಇರುತ್ತಾರೆ’ ಎಂದು ಚಿತ್ರ ನಟ ದುನಿಯಾ ವಿಜಯ್ ತಿಳಿಸಿದ್ದಾರೆ.
ಗುರುವಾರ ನಗರದ ನ್ಯಾಷನಲ್ ಕಾಲೇಜಿನಲ್ಲಿ ಗೌರಿ ಮೀಡಿಯಾ ಟ್ರಸ್ಟ್ ವತಿಯಿಂದ ಗೌರಿ ಲಂಕೇಶ್ ಅವರ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ‘ನಾವೆಲ್ಲ ಗೌರಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೌರಿ ಲಂಕೇಶ್ ಹಾಗೂ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು ‘ಲ್ಯಾಂಡ್‍ಲಾರ್ಡ್’ ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ. ನಾನು ಜಿಮ್ ಟ್ರೈನರ್ ಆಗಿದ್ದಾಗ 1500 ರೂ.ಸಂಬಳ. ಪ್ರತೀ ತಿಂಗಳು ಗೌರಿ ಲಂಕೇಶ್ ಅವರು ನನಗೆ 500ರೂ. ಹೆಚ್ಚು ಕೊಡುತ್ತಿದ್ದರು. ಆವಾಗ ನನಗೆ 500ರೂ. 5 ಕೋಟಿ ರೂ.ಗಳಿಗೆ ಸಮವಾಗಿತ್ತು ಎಂದು ಅವರು ನೆನಪು ಮಾಡಿಕೊಂಡರು.
ಅಂಕಣಕಾರ ಶಿವಸುಂದರ್ ಮಾತನಾಡಿ, ‘ಪತ್ರಕರ್ತೆ ಗೌರಿ ಲಂಕೇಶ್ ಅವರು ಶೋಷಣೆಯನ್ನು ಅನುಭವಿಸಿ ಬಂದವರಲ್ಲ. ಆದರೆ ಚಳವಳಿಗೆ ಬಂದ ನಂತರ ಅವರು ಬಹಿರಂಗದ ಮೌಲ್ಯವನ್ನು ಅಂತರಂಗಕ್ಕೆ ಇಳಿಸಿಕೊಂಡ ವಿಧಾನ ನಮ್ಮೆಲ್ಲರಿಗೂ ಮಾದರಿ. ಅವರು ಸಮಾಜವನ್ನು ಬದಲಿಸಬೇಕು ಎಂದುಕೊಂಡವರಿಗೆ ಬಹಳ ದೊಡ್ಡ ಮಾದರಿ’ ಎಂದರು.
ಗೌರಿ ಲಂಕೇಶ್ ಅವರ ಬಗ್ಗೆ ಮಾತನಾಡುವಾಗ ಅತ್ಯಂತ ಬಾವುಕನಾಗುತ್ತೇನೆ. ನನ್ನಂತಹ ಸಾಮಾಜಿಕ ಹಿನ್ನೆಲೆಯಿಂದ ಬಂದ, ಯಾವುದೇ ಬಗೆಯ ವ್ಯಕ್ತಿಗತ ಶೋಷಣೆಯ ಅನುಭವ ಪಡೆಯದೇ ಇರುವುವರು ಮಾತನಾಡುವುದು ಸುಲಭ, ಆದರೆ ಅದನ್ನು ಅರಗಿಸಿಕೊಳ್ಳುವುದು ಕಷ್ಟ ಎಂದು ಅವರು ಹೇಳಿದರು.
ಬದಲಾವಣೆಯ ಪ್ರಶ್ನೆ ಬಂದಾಗ ತನ್ನ ಬಗ್ಗೆ ಹಾಗೂ ಶತ್ರು, ಮಿತ್ರರ ಬಗ್ಗೆಯೂ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುತ್ತಿರಲಿಲ್ಲ ಎಂದು ಅವರು ತಿಳಿಸಿದರು.
ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಮಾತನಾಡಿ, ಗೌರಿ ಲಂಕೇಶ್ ಹೆಸರಿನಲ್ಲಿ ಒಂದು ಪ್ರಶಸ್ತಿ ಕೊಡುತ್ತಿದ್ದೆವು. ಸುಮಾರು ವರ್ಷದಿಂದ ಅದನ್ನು ನಿಲ್ಲಿಸಲಾಗಿತ್ತು. ಅದನ್ನು ಮತ್ತೆ ಪ್ರಾರಂಭಿಸಬೇಕು. ಸ್ವತಂತ್ರ ಪತ್ರಿಕೋದ್ಯಮದ ಉಳಿವಿಗಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಬೇಕು ಎಂದು ಕೊಂಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಂದಿರಾ ಲಂಕೇಶ್, ಗೌರಿ ಮೀಡಿಯಾ ಟ್ರಸ್ಟ್ ಅಧ್ಯಕ್ಷ ಪ್ರೊ.ನಗರಗೆರೆ ರಮೇಶ್, ಕಾರ್ಯದರ್ಶಿ ರಾಜಲಕ್ಷ್ಮೀ ಅಂಕಲಗಿ, ಹೋರಾಟಗಾರ ನೂರ್ ಶ್ರೀಧರ್, ಪತ್ರಕರ್ತ ಚಂದ್ರು ತರಹುಣಸೆ ಮತ್ತಿತರರು ಉಪಸ್ಥಿತರಿದ್ದರು.