ಪಾನಮತ್ತರಾಗಿ ವಾಹನ ಚಲಾಯಿಸಿ ಅಪಘಾತ: ನಟ ಮಯೂರ್ ಪಟೇಲ್ ವಿರುದ್ಧ ಪ್ರಕರಣ ದಾಖಲು
Update: 2026-01-29 20:48 IST
ನಟ ಮಯೂರ್ ಪಟೇಲ್ (Photo: indiatoday.in)
ಬೆಂಗಳೂರು: ಮದ್ಯಪಾನ ಮಾಡಿ ತಮ್ಮ ಫಾರ್ಚೂನರ್ ಕಾರನ್ನು ವೇಗವಾಗಿ ಚಲಾಯಿಸಿ ರಸ್ತೆ ಬದಿ ನಿಂತಿದ್ದ ಕಾರುಗಳಿಗೆ ಢಿಕ್ಕಿ ಹೊಡೆದ ಸಂಬಂಧ ಕನ್ನಡ ಚಲನಚಿತ್ರ ನಟ ಮಯೂರ್ ಪಟೇಲ್ ವಿರುದ್ಧ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೊಮ್ಮಲೂರು ಬಳಿಯ ಕಮಾಂಡೋ ಆಸ್ಪತ್ರೆ ಬಳಿ ಮಯೂರ್ ಅವರ ಕಾರು ಗುದ್ದಿದ ರಭಸಕ್ಕೆ ಶ್ರೀನಿವಾಸ್, ಅಭಿಷೇಕ್ ಎಂಬವರ ಕಾರುಗಳು ಹಾಗೂ ಸರಕಾರಿ ವಾಹನ ಜಖಂ ಆಗಿದೆ. ಅಪಘಾತದ ಕುರಿತು ಶ್ರೀನಿವಾಸ್ ಎಂಬವರು ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಪಾಸಣೆ ವೇಳೆ ನಟ ಮಯೂರ್ ಪಟೇಲ್ ಕುಡಿದು ವಾಹನ ಚಲಾಯಿಸಿರುವುದು ಸಾಬೀತಾಗಿದ್ದು, ಅವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಸದ್ಯ ಮಯೂರ್ ಪಟೇಲ್ ಕಾರ್ ಸೀಝ್ ಮಾಡಲಾಗಿದೆ. ಅಪಘಾತದ ವೇಳೆ ಮಯೂರ್ ಪಟೇಲ್ ಕಾರಿಗೆ ವಿಮೆ ಇಲ್ಲದಿರುವುದು ಪತ್ತೆಯಾಗಿದೆ.