ವಿಮರ್ಶಕ ಡಾ.ಕೆ.ವಿ.ನಾರಾಯಣ ನಿಧನಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಸಂತಾಪ
ಬೆಂಗಳೂರು: ಹಿರಿಯ ಸಾಹಿತಿ, ಭಾಷಾಶಾಸ್ತ್ರಜ್ಞ ಹಾಗೂ ವಿಮರ್ಶಕ, ಕುವೆಂಪು ಭಾಷಾ ಭಾರತಿ ಮಾಜಿ ಅಧ್ಯಕ್ಷ ಕೆ.ವಿ. ನಾರಾಯಣ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ದಶಕಗಳ ಕಾಲ ಕನ್ನಡವನ್ನೇ ಉಸಿರಾಡಿದ ಹಿರಿಯರಾದ ಕೆ.ವಿ. ನಾರಾಯಣ ಅವರು ಕನ್ನಡ ಭಾಷೆಯ ಉಳಿವಿಗಾಗಿ ಹಾಗೂ ಮುಂದಿನ ಪೀಳಿಗೆಗೆ ಕನ್ನಡವನ್ನು ತಲುಪಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದ್ದಾರೆ.
ಅಕ್ಷರಗಳ ಮೂಲಕ ಕನ್ನಡ ಲೋಕವನ್ನು ಕಟ್ಟಿಕೊಟ್ಟ ಅವರು, ಅನೇಕ ಅನುವಾದಗಳ ಮೂಲಕ ಭಾಷೆಯ ಅಳಿವು-ಉಳಿವಿನ ಕುರಿತು ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದ್ದರು. ತಮ್ಮ ವಿದ್ವತ್ತಿನ ಮೂಲಕ ಅಪರೂಪದ ವೈಚಾರಿಕ ಒಳನೋಟಗಳನ್ನು ನೀಡಿದವರು. ಕನ್ನಡ, ಕನ್ನಡಿಗರು ಹಾಗೂ ಕರ್ನಾಟಕದ ಏಳಿಗೆಗೆ ಹಲವು ಸಲಹೆ-ಸೂಚನೆಗಳನ್ನು ನೀಡುವುದರ ಜತೆಗೆ, ತಮ್ಮದೇ ಆದ ಆಲೋಚನಾ ಪರಂಪರೆಯನ್ನು ಬೆಳೆಸಿದವರಲ್ಲಿ ಪ್ರಮುಖರಾಗಿದ್ದರು ಎಂದು ತಿಳಿಸಿದ್ದಾರೆ.
ಕರ್ನಾಟಕ ಏಕೀಕರಣದ ನೆನಪಿನ ನವೆಂಬರ್ ತಿಂಗಳಿನಲ್ಲೇ ಹಿರಿಯ ಸಾಹಿತಿಯನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಅಪಾರ ಶಿಷ್ಯವರ್ಗ, ಸಾಹಿತ್ಯ ಪ್ರೇಮಿಗಳು ಹಾಗೂ ಕುಟುಂಬದವರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸುವುದಾಗಿ ಡಿ.ಕೆ.ಶಿವಕುಮಾರ್ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.