×
Ad

ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2025-08-26 19:02 IST

ಬೆಂಗಳೂರು, ಆ.26 : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಇದು ಹಿಂದೂಗಳ ಆಸ್ತಿಯಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. 

ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಬೇಡ ಎಂದು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.

ನಾವುಗಳು ಮಸೀದಿ, ದರ್ಗಾಗಳಿಗೆ, ಜೈನರ ಬಸದಿಗಳಿಗೆ, ಚರ್ಚ್, ಗುರುದ್ವಾರಗಳಿಗೆ ಹೋಗುತ್ತೇವೆ. ನಾವು ಗುರುದ್ವಾರಕ್ಕೆ ಹೋಗೋದನ್ನ ಯಾರಾದರೂ ತಪ್ಪಿಸಿದ್ದಾರಾ? ಹಿಂದೂ ದೇವಸ್ಥಾನಗಳಿಗೆ ಅವರು ಬರುವುದನ್ನು ನಾವು ವಿರೋಧಿಸಿದ್ದೇವೆಯೇ? ಯಾವುದೇ ಶ್ರದ್ದಾ ಕೇಂದ್ರಗಳಿಗೆ ಯಾರು ಬೇಕಾದರೂ ಹೋಗಿ ಬರಬಹುದು ಎಂದು ಅವರು ಹೇಳಿದರು.

ಎಷ್ಟೋ ಜನ ಹಿಂದೂಗಳು ಮುಸ್ಲಿಮರಾಗಿ, ಕ್ರಿಶ್ಚಿಯನ್ನರಾಗಿ ಹಾಗೂ ಬೇರೆ ಧರ್ಮದವರು ಹಿಂದೂಗಳಾಗಿ ಮತಾಂತರವಾಗಿಲ್ಲವೇ? ಮುಸ್ಲಿಮರು ಹಿಂದೂ ಧರ್ಮದ ಆಚರಣೆಗಳನ್ನು ಮಾಡುತ್ತಿಲ್ಲವೇ? ಅಯೋಧ್ಯೆ ರಾಮನಿಗೆ ಹಿಂದುಗಳು ಮಾತ್ರ ಬರಬೇಕು ಎಂದು ಏಕೆ ಬೋರ್ಡ್ ಹಾಕಿಲ್ಲ? ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಸರಕಾರ ಇದ್ದ ವೇಳೆ ಹಾಗೂ ಈಗ ಇಡೀ ದೇಶದಲ್ಲಿ ಹಜ್ ಕಮಿಟಿ, ಅಲ್ಪಸಂಖ್ಯಾತ ಇಲಾಖೆಗಳನ್ನು ಏಕೆ ರದ್ದು ಮಾಡಲಿಲ್ಲ? ಇದೆಲ್ಲವೂ ರಾಜಕೀಯ ಎಂದು ತಿರುಗೇಟು ನೀಡಿದ ಶಿವಕುಮಾರ್, ನಮ್ಮದು ಜಾತ್ಯತೀತ ರಾಷ್ಟ್ರ. ನಮ್ಮ ಸಂವಿಧಾನದ ಮೂಲಕ ಎಲ್ಲರಿಗೂ ಅವಕಾಶ, ಸ್ವಾತಂತ್ರ್ಯ ಕಲ್ಪಿಸಲಾಗಿದೆ. ಎಲ್ಲರಿಗೂ ಸಂವಿಧಾನದ ರಕ್ಷಣೆಯಿದೆ. ಅಂತರ್ ಧರ್ಮೀಯ ದಂಪತಿಗಳಿಗೆ ಜನಿಸಿದ ಮಕ್ಕಳು ತಮಗೆ ಬೇಕಾದ ಧರ್ಮವನ್ನು ಆಚರಣೆ ಮಾಡುತ್ತಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News