×
Ad

ಕೊಲೆ ಬೆದರಿಕೆ ಆರೋಪ: ಬಿಗ್‍ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ಎರಡು ಪ್ರತ್ಯೇಕ ಎಫ್‍ಐಆರ್ ದಾಖಲು

Update: 2026-03-08 20:24 IST

ಬೆಂಗಳೂರು : ಕೊಲೆ ಬೆದರಿಕೆ, ಅವಾಚ್ಯ ನಿಂದನೆ ಆರೋಪದಡಿ ಬಿಗ್‍ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ಬೆಂಗಳೂರಿನ ಎರಡು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಎಫ್‍ಐಆರ್ ದಾಖಲಾಗಿದೆ.

ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಹಾಗೂ ಬಿಗ್‍ಬಾಸ್ ಮಾಜಿ ಸ್ಪರ್ಧಿ ಸತೀಶ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಕೆ.ಆರ್.ಪುರ ಹಾಗೂ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್‍ಐಆರ್‍ಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಎಂಬುವವರು ದೂರು ನೀಡಿದ್ದು, ಮಾರ್ಚ್ 2ರಂದು ರಜತ್ ಗಿರೀಶ್‍ಗೆ ಸತತವಾಗಿ ವಾಟ್ಸಪ್ ಮೂಲಕ ಕರೆ ಮಾಡಿ ಬಿಗ್‍ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ ಸ್ನೇಹ ಬಿಡಬೇಕೆಂದು ಬೆದರಿಕೆ ಹಾಕಿ ಅಸಭ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಎರಡನೇ ಪ್ರಕರಣವು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಬಿಗ್ ಬಾಸ್ ಸ್ಪರ್ಧಿ ಸತೀಶ್ ಯಾನೆ ಡಾಗ್ ಸತೀಶ್ ಅವರು ರಜತ್ ಮತ್ತು ಧನರಾಜ್ ಎಂಬುವವರ ವಿರುದ್ಧ ದೂರು ನೀಡಿದ್ದಾರೆ. 2025ರ ಡಿಸೆಂಬರ್‍ನಲ್ಲಿ ಯೂಟ್ಯೂಬ್ ಸಂದರ್ಶನದ ನೆಪದಲ್ಲಿ ಸತೀಶ್ ಅವರನ್ನು ಭೇಟಿಯಾಗಿದ್ದ ರಜತ್, ಆ ಸಂಭಾಷಣೆಯನ್ನು ತಮಗೆ ಅವಮಾನವಾಗುವ ರೀತಿಯಲ್ಲಿ ಎಡಿಟ್ ಮಾಡಿ ಪ್ರಸಾರ ಮಾಡಿದ್ದಾರೆ ಎಂದು ಸತೀಶ್ ಆರೋಪಿಸಿದ್ದಾರೆ.

ಅಲ್ಲದೆ, 2026ರ ಫೆಬ್ರವರಿ 27ರಂದು ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸತೀಶ್ ದೂರಿದ್ದಾರೆ. ಈ ಸಂಬಂಧ ಸುಮಾರು 2 ಗಂಟೆಗಳ ಅವಧಿಯ ಆಡಿಯೋ ಮತ್ತು ವಿಡಿಯೋ ಸಾಕ್ಷ್ಯಗಳನ್ನು ಸತೀಶ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.

ಸದ್ಯ ಬಿಎನ್‍ಎಸ್ 351 ಹಾಗೂ 352 ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News