×
Ad

ಮಹಿಳಾ ದಿನಾಚರಣೆ ದಿನವೇ ಕೇಂದ್ರದಿಂದ ‘ಸಿಲಿಂಡರ್ ಬೆಲೆ ಏರಿಕೆ ಉಡುಗೊರೆ’: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

Update: 2026-03-08 22:41 IST

ಬೆಂಗಳೂರು : ಮಹಿಳಾ ದಿನಾಚರಣೆಯ ದಿನವೇ ದೇಶದ ಮಹಿಳೆಯರಿಗೆ ಕೇಂದ್ರದ ಬಿಜೆಪಿ ಸರಕಾರ ಅಡುಗೆ ಅನಿಲದ ಬೆಲೆ ಏರಿಕೆ ಮಾಡಿ ಉಡುಗೊರೆ ನೀಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಲೇವಡಿ ಮಾಡಿದ್ದಾರೆ.

ರವಿವಾರ ಈ ಕುರಿತು ಪ್ರಕಟಣೆ ನೀಡಿರುವ ಅವರು, ಗೃಹ ಬಳಕೆಯ ಅಡುಗೆ ಅನಿಲದ ಸಿಲಿಂಡರ್ ಬೆಲೆಯಲ್ಲಿ ಏಕಾಏಕಿ 60 ರೂ.ಹೆಚ್ಚಳ ಮಾಡಲಾಗಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 115 ರೂ.ಗಳಿಗೆ ಏರಿಕೆ ಮಾಡಲಾಗಿದೆ. 11 ತಿಂಗಳಲ್ಲಿ ಗೃಹ ಬಳಕೆಯ ಸಿಲಿಂಡರ್ ಬೆಲೆ ಒಟ್ಟು 110 ರೂ.ಹೆಚ್ಚಳ ಮಾಡಿರುವುದು ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಮೇಲೆ ಭಾರೀ ಹೊರೆ ಹಾಕಿದಂತಾಗಿದೆ ಎಂದು ಟೀಕಿಸಿದ್ದಾರೆ.

ಅಡುಗೆ ಅನಿಲವು ಪ್ರತಿಯೊಂದು ಮನೆಯ ಅಗತ್ಯ ವಸ್ತುವಾಗಿದೆ. ಮನೆಗಳನ್ನು ನಡೆಸುವ ಮಹಿಳೆಯರ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಈ ಅಗತ್ಯ ವಸ್ತುವಿನ ಬೆಲೆ ಹೆಚ್ಚಿಸುವುದು ಮಹಿಳೆಯರ ಮೇಲೆ ಮತ್ತಷ್ಟು ಆರ್ಥಿಕ ಒತ್ತಡ ತರುವ ಕ್ರಮವಾಗಿದೆ. ಮಹಿಳಾ ಸಬಲೀಕರಣದ ಬಗ್ಗೆ ಮಾತಾಡುವ ಕೇಂದ್ರ ಸರಕಾರ ಮಹಿಳೆಯರ ದಿನದಂದೇ ಇಂತಹ ನಿರ್ಧಾರ ಕೈಗೊಂಡಿರುವುದು ವಿಷಾದಕರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರದ ವಿರುದ್ಧ ಸದಾ ಆರೋಪ ಮತ್ತು ಪ್ರತಿಭಟನೆ ಮಾಡುವ ಬಿಜೆಪಿ ನಾಯಕರು ಇದೀಗ ಏನು ಹೇಳುತ್ತಾರೆ?. ಕೇಂದ್ರ ಸರಕಾರದ ಈ ಬೆಲೆ ಏರಿಕೆಯನ್ನು ಅವರು ಸಮರ್ಥಿಸಿಕೊಳ್ಳುತ್ತಾರೆಯೇ? ಅಥವಾ ಬಡವರ ಮತ್ತು ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತಾರೆಯೇ? ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.

ಕೇಂದ್ರದ ಬಿಜೆಪಿ ಸರಕಾರಕ್ಕೆ ಜನಸಾಮಾನ್ಯರ ಬಗ್ಗೆ ಕನಿಷ್ಟ ಕಳಕಳಿ ಇದ್ದರೆ ತಕ್ಷಣವೇ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು. ಆಮೂಲಕ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಉಂಟಾಗಿರುವ ಆರ್ಥಿಕ ಭಾರವನ್ನು ಕಡಿಮೆ ಮಾಡಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News