ಗ್ರಾಮೀಣ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಮೂಡಿಸಿ : ಪ್ರಿಯಾಂಕ್ ಖರ್ಗೆ ಕರೆ
ಪ್ರಿಯಾಂಕ್ ಖರ್ಗೆ
ಬೆಂಗಳೂರು : ಗ್ರಾಮೀಣ ಜನರಲ್ಲಿ ಹಾಗೂ ವಿದ್ಯಾರ್ಥಿ ಸಮೂಹದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಮೂಡಿಸಬೇಕೆಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೊಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಷಿಪ್ ಕಾರ್ಯಕ್ರಮದಡಿ ಆಯ್ಕೆಗೊಂಡು, ಕಲ್ಯಾಣ ಕರ್ನಾಟಕ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 44 ಮಂದಿ ಫೆಲೊಗಳೊಂದಿಗೆ ವಿಕಾಸಸೌಧದಲ್ಲಿ ಏರ್ಪಡಿಸಲಾಗಿದ್ದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ದೃಷ್ಟಿಯಿಂದ ಫೆಲೊಗಳು ಸೇತುವೆಗಳಂತೆ ಕಾರ್ಯನಿರ್ವಹಿಸಬೇಕು, ಈ ಪ್ರದೇಶದ ಅಭಿವೃದ್ಧಿಗಾಗಿ ಸರಕಾರ ರಚಿಸಿರುವ ಗೋವಿಂದರಾವ್ ಸಮಿತಿಗೆ ಪೂರಕ ಅಂಕಿ ಅಂಶಗಳ ದತ್ತಾಂಶಗಳನ್ನು ನೀಡುವ ದೃಷ್ಟಿಯಲ್ಲಿಯೂ ಫೆಲೊಗಳು ಕಾರ್ಯಪ್ರವೃತ್ತರಾಗಬೇಕೆಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಗ್ರಾಮ ಪಂಚಾಯತಿಗಳ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ನಿಕಟ ಸಂಪರ್ಕ ಇರಿಸಿಕೊಂಡು ಗ್ರಾಮ ಪಂಚಾಯತಿಗಳಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸಲು ವರದಿಯನ್ನು ಸಿದ್ಧಪಡಿಸಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಬೇಕು, ಆ ಮೂಲಕ ಗ್ರಾಮ ಪಂಚಾಯತಿಗಳ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಫೆಲೊಗಳಿಗೆ ಅವರು ಸೂಚಿಸಿದರು.
ರಾಜೀವ್ ಗಾಂಧಿ ಗ್ರಾಮೀಣಾಭಿವೃದ್ಧಿ ಫೆಲೊಷಿಪ್ ಕಾರ್ಯಕ್ರಮದಡಿ 2024ರ ಜೂನ್ ತಿಂಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 44 ಮಂದಿ ಫೆಲೊಗಳನ್ನು ಆಯ್ಕೆ ಮಾಡಿ ಕಲ್ಯಾಣ ಕರ್ನಾಟಕ ಭಾಗದ ವಿವಿಧ ತಾಲ್ಲೂಕುಗಳಿಗೆ ನಿಯೋಜಿಸಲಾಗಿದೆ. ಸ್ಥಳೀಯ ಆಡಳಿತವನ್ನು ಬಲ ಪಡಿಸಲು ಫೆಲೊಗಳು ವಿವಿಧ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ವಿವಿಧ ತಾಲ್ಲೂಕುಗಳಿಗೆ ನಿಯೋಜನೆಗೊಂಡಿರುವ ಫೆಲೊಗಳು ಕಳೆದ ಐದು ತಿಂಗಳಲ್ಲಿ ಮಾಡಿರುವ ಕಾರ್ಯಚಟುವಟಿಕೆಗಳನ್ನು ಸಭೆಯಲ್ಲಿ ಸಚಿವರ ಗಮನಕ್ಕೆ ತರಲಾಯಿತು. 62 ಪುಸ್ತಕ ಗೂಡುಗಳ ಆರಂಭ, 39 ಅರಿವು ಕೇಂದ್ರಗಳ ಪುನರಾರಂಭ, ವೃತ್ತಪತ್ರಿಕೆಗಳೊಂದಿಗೆ 56 ಅರಿವು ಕೇಂದ್ರಗಳ ಆರಂಭ, 116 ಕೂಸಿನಮನೆ ಪುನರಾರಂಭ, 66 ಕೂಸಿನ ಮನೆಗಳ ಮೂಲಭೂತ ಸೌಲಭ್ಯ ಸುಧಾರಣೆ, 95 ಕೂಸಿನ ಮನೆಗಳ ನಿರ್ವಹಣೆಯಲ್ಲಿ ಸುಧಾರಣೆ.
86 ಕೂಸಿನಮನೆಗಳಲ್ಲಿ ಪೌಷ್ಠಿಕ ಆಹಾರ ವಿತರಣೆಗೆ ಚಾಲನೆ, 61 ಗ್ರಾಮ ಪಂಚಾಯತಿಗಳಲ್ಲಿ ತ್ಯಾಜ್ಯ ಸಂಗ್ರಹ, ವಿಂಗಡಣೆ ಹಾಗೂ ವಿಲೇವಾರಿಗೆ ಚಾಲನೆ, 197 ಗ್ರಾಮ ಪಂಚಾಯತಿಗಳ ಸರ್ವ ಸದಸ್ಯರ ಸಭೆ ಏರ್ಪಾಟು, 104 ಗ್ರಾಮ ಪಂಚಾಯತಿಗಳ ಸಭಾ ನಡಾವಳಿ ಪಿ2.0 ತಂತ್ರಾಂಶದಲ್ಲಿ ಅಳವಡಿಕೆ, 508 ಗ್ರಾಮ ಪಂಚಾಯತಿಗಳಲ್ಲಿ ಉಪ-ಸಮಿತಿಗಳ ರಚನೆ ಮುಂತಾದ ಸುಧಾರಣ ಕಾರ್ಯ ಫೆಲೊಗಳು ಸಾಧ್ಯ ಮಾಡಿರುವುದನ್ನು ಪ್ರಿಯಾಂಕ್ ಖರ್ಗೆ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಮತ್ತು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಉಪಸ್ಥಿತರಿದ್ದರು.