×
Ad

ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಿಸುವ ಹೇಳಿಕೆ ನೀಡಿಲ್ಲ : ದಿನೇಶ್ ಗುಂಡೂರಾವ್

Update: 2025-03-25 22:13 IST

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಾಯಿಸುವ ಹೇಳಿಕೆ ಕೊಟ್ಟಿಲ್ಲ. ಬಿಜೆಪಿಯವರು ಈ ವಿಷಯದಲ್ಲಿ ಇಲ್ಲದ ರಂಪಾಟ ಮಾಡುತ್ತಿದ್ದಾರೆ. ಅವರ ಹೇಳಿಕೆಯನ್ನು ತಿರುಚುವ ಮೂಲಕ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮಂಗಳವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಖಾಸಗಿ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಮಾತಾಡಿರುವ ಸಂಪೂರ್ಣ ವಿಡಿಯೋ ಇದೆ. ವಿವಿಧ ಕೋರ್ಟ್ ತೀರ್ಪುಗಳ ಪ್ರಕಾರ ಕೆಲವೊಮ್ಮೆ ಸಂವಿಧಾನ ತಿದ್ದುಪಡಿಯಾಗಿದೆ ಎಂದು ಹೇಳಿದ್ದಾರೆ. ಇದರಲ್ಲಿ ಸಂವಿಧಾನ ಬದಲಾಯಿಸುವ ಮಾತೆಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ಸಂವಿಧಾನ ಬದಲಾಯಿಸುವ ಗುಪ್ತ ಅಜೆಂಡಾ ಬಿಜೆಪಿಯವರದ್ದೇ ಹೊರತು ಕಾಂಗ್ರೆಸ್‍ನದಲ್ಲ. ಈ ಹಿಂದೆ ಅನಂತ್ ಕುಮಾರ್ ಹೆಗಡೆ ಬಹಿರಂಗವಾಗಿ ಸಂವಿಧಾನ ಬದಲಾಯಿಸುವ ಹೇಳಿಕೆ ಕೊಟ್ಟಿದ್ದರು. ಆಗ ಬಿಜೆಪಿಯವರು ಬಾಯಿಗೆ ಕಡುಬು ತುರಿಕಿಸಿಕೊಂಡವರಂತೆ ಮೌನವಾಗಿದ್ದರು. ಆಗ ಯಾಕೆ ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿರೋಧಿಸಿರಲಿಲ್ಲ ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿಯವರು ಸಂವಿಧಾನದ ವಿರೋಧಿಗಳು ಎಂಬುದು ದೇಶಕ್ಕೆ ಗೊತ್ತಿದೆ. ಸಂವಿಧಾನದ ಬಗ್ಗೆ ಬಿಜೆಪಿಯವರ ಕಾಳಜಿ ಕೇವಲ ಬೂಟಾಟಿಕೆಯಷ್ಟೇ. ಬಿಜೆಪಿಯವರು ಡಿ.ಕೆ.ಶಿವಕುಮಾರ್ ಹೇಳಿಕೆ ತಿರುಚುವ ಬದಲು ಸಂವಿಧಾನದ ಆಶಯದಂತೆ ಆಡಳಿತ ನಡೆಸಲು ತಮ್ಮ ನಾಯಕರಿಗೆ ಸಲಹೆ ನೀಡಲಿ ಎಂದು ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News