×
Ad

ಬೆಂಗಳೂರನ್ನು ಸುಸ್ಥಿರ-ಹಸಿರು ನಗರವನ್ನಾಗಿ ರೂಪಿಸಲು ಕೈಜೋಡಿಸಿ : ದಿನೇಶ್ ಗುಂಡೂರಾವ್

Update: 2025-06-20 20:58 IST

ಬೆಂಗಳೂರು, ಜೂ.20: ನಗರವು ಬೆಳೆಯುತ್ತಿದ್ದಂತೆ ಪರಿಸರದ ಸವಾಲುಗಳೂ ಹೆಚ್ಚಾಗುತ್ತವೆ. ಹೀಗಾಗಿ ಬೆಂಗಳೂರನ್ನು ಸುಸ್ಥಿರ-ಹಸಿರು ನಗರವನ್ನಾಗಿ ರೂಪಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.

ಶುಕ್ರವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯು ಆಯೋಜಿಸಿದ್ದ ‘ಗ್ರೀನ್ ರೇಟಿಂಗ್ ಫಾರ್ ಇಂಟೀಗ್ರೇಟೆಡ್ ಹ್ಯಾಬಿಟೆಟ್ ಮೌಲ್ಯಮಾಪನ-ಪ್ರಾದೇಶಿಕ ಸಮಾವೇಶ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಸಮಾವೇಶವು ಹಸಿರು ಕಟ್ಟಡಗಳ ನಿರ್ಮಾಣ ಮತ್ತು ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಸಮಾವೇಶವು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ನಾವೀನ್ಯಪೂರ್ಣ ಪರಿಹಾರಗಳನ್ನು ಕಂಡುಕೊಳ್ಳಲು ಒಂದು ಪ್ರಮುಖ ವೇದಿಕೆಯಾಗಿದೆ ಎಂದರು.

ಹವಾಮಾನ ಬದಲಾವಣೆಯ ಪ್ರಭಾವವು ನಮ್ಮ ಜನರ ಮೇಲೂ ಭಾರೀ ಪರಿಣಾಮ ಬೀರುತ್ತದೆ. ನೀರಿನ ಸಮಸ್ಯೆ, ತ್ಯಾಜ್ಯ ನಿರ್ವಹಣೆ ಮತ್ತು ಸಂಚಾರ ದಟ್ಟಣೆ ನಮ್ಮ ನಗರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾಗಿದ್ದು, ಈ ಸಮಾವೇಶವು ನಗರದ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರಗಳನ್ನು ಚರ್ಚಿಸಲು ಮತ್ತು ಕಾರ್ಯರೂಪಕ್ಕೆ ತರಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವ ತಜ್ಞರು, ನೀತಿ ನಿರೂಪಕರು, ವಾಸ್ತುಶಿಲ್ಪಿಗಳು, ಇಂಜಿನಿಯರ್‍ಗಳು ಮತ್ತು ಪರಿಸರ ಪ್ರೇಮಿಗಳು ತಮ್ಮ ಅನುಭವ ಮತ್ತು ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ಸುಸ್ಥಿರ ಭವಿಷ್ಯಕ್ಕಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ಸಹಕರಿಸಲಿದ್ದಾರೆ ಎಂದು ಅವರು ಆಶಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News