ಧರ್ಮಸ್ಥಳ ಪ್ರಕರಣ | ಎಸ್‍ಐಟಿಗೆ ಹೆಚ್ಚಿನ ಮಾಹಿತಿ ಲಭ್ಯವಾದರೆ, ಪರಿಶೀಲನೆ : ದಿನೇಶ್ ಗುಂಡೂರಾವ್
ಬೆಂಗಳೂರು : ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ, ದೂರುದಾರ ಗುರುತಿಸಿದ ಬಹುತೇಕ ಸ್ಥಳಗಳಲ್ಲಿ ಪರಿಶೀಲನೆ ನಡೆದಿದೆ. ನಾಳೆ(ಆ.8) ಸ್ಥಳ ಪರಿಶೀಲನೆ ಮುಕ್ತಾಯವಾಗುವ ಸಾಧ್ಯತೆ ಇದ್ದು, ಪ್ರಕರಣದ ಬಗ್ಗೆ ಎಸ್‍ಐಟಿಗೆ ಹೆಚ್ಚಿನ ಮಾಹಿತಿ ಲಭ್ಯವಾದರೆ, ಪರಿಶೀಲಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಮೊದಲಿನಿಂದಲೂ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದೇವೆ. ಇದರಿಂದ ಬಹಳಷ್ಟು ವಿಷಯಗಳು ಹೊರಗೆ ಬಂದಿವೆ. ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ ಎಂದರು.
ಪ್ರಕರಣದ ಕುರಿತಾಗಿ ಎಸ್‍ಐಟಿ ಸೇರಿದಂತೆ, ಸರಕಾರವಾಗಲೀ, ನಮ್ಮ ಪಕ್ಷದವರಾಗಲೀ, ಎಲ್ಲಿಯೂ ಹಗುರವಾಗಿ ಮಾತನಾಡಿಲ್ಲ. ಸಾಕ್ಷಿಗಳ ಆಧಾರದಲ್ಲಿಯೇ ಪಾರದರ್ಶಕವಾಗಿ ತನಿಖೆಯನ್ನು ನಡೆಸಲಾಗುತ್ತಿದೆ. ಪ್ರಕರಣದ ಆರೋಪಗಳು ಮತ್ತು ವಿಷಯಗಳು ಗಂಭೀರವಾಗಿದ್ದು, ಅದು ನಿಜವಾದರೆ, ವಿಶ್ವವ್ಯಾಪಿ ದೊಡ್ಡ ಸುದ್ದಿಯಾಗಲಿದೆ. ಹೀಗಾಗಿ ಎಸ್‍ಐಟಿ ಸ್ಪಷ್ಟ ತನಿಖೆಯನ್ನು ನಡೆಸುತ್ತಿದ್ದು, 12 ಅಥವಾ 13ನೇ ಸ್ಥಳದಲ್ಲಿ ಪರಿಶೀಲನೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಯೂಟ್ಯೂಬ್‍ನಲ್ಲಿ ಏನು ಹೇಳುತ್ತಾರೆ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ. ದೇಶದ ಜನರಿಗೆ ಮಾತನಾಡಲೂ ಅವಕಾಶ ಇದೆ. ಕೋರ್ಟ್ ಮಾನ್ಯತೆಯನ್ನು ಕೊಟ್ಟಿದೆ. ಆದರೆ ಯಾರು ಸಹ ಏನನ್ನು ವೈಭವೀಕರಿಸಬಾರದು. ವಾಸ್ತವದ ಬಗ್ಗೆ ಮಾತನಾಡಬೇಕು ಎಂದು ಅವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರೇ ಪ್ರಕರಣವನ್ನು ತನಿಖೆ ಮಾಡುತ್ತಿದ್ದರು. ಅವರಿಗೆ ಆ ಸಾಮರ್ಥ್ಯ ಇದ್ದು, ಎಸ್‍ಐಟಿಗೆ ಕೊಡುವ ಅಗತ್ಯತೆ ಇರಲಿಲ್ಲ. ಎಡಪಂಥೀಯ ಸಂಘಟನೆಗಳು ಸೇರಿ ಅನೇಕ ಸಂಘಗಳು ಎಸ್‍ಐಟಿ ರಚನೆ ಮಾಡಲು ಒತ್ತಡ ಹಾಕಿದರು. ಎಸ್‍ಐಟಿ ರಚನೆಗೆ ದೊಡ್ಡಮಟ್ಟದಲ್ಲಿ ಚರ್ಚೆಯಾಯಿತು. ಹೀಗಾಗಿ ಸರಕಾರವೂ ಪಾರದರ್ಶಕ ತನಿಖೆಗೆ ಎಸ್‍ಐಟಿಯನ್ನು ರಚನೆ ಮಾಡಿದೆ.
-ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ