×
Ad

ಎಲ್ಲ ಸಂಸ್ಥೆಗಳು ನುರಿತ ಮನಃಶಾಸ್ತ್ರಜ್ಞರನ್ನು ನೇಮಿಸಿಕೊಳ್ಳಬೇಕು : ದಿನೇಶ್ ಗುಂಡೂರಾವ್

Update: 2025-02-28 23:15 IST

ಬೆಂಗಳೂರು : ಡಿಜಿಟಲ್ ಯುಗದಲ್ಲಿ ಮಾನಸಿಕ ಒತ್ತಡ, ಖಿನ್ನತೆಗಳು ಅತ್ಯಧಿಕವಾಗಿದ್ದು, ಎಲ್ಲರಿಗೂ ಮನೋವಿಜ್ಞಾನದ ಅವಶ್ಯಕತೆ ಇದೆ. ಎಲ್ಲ ಸಂಸ್ಥೆಗಳು ನುರಿತ ಮನಃಶಾಸ್ತ್ರಜ್ಞರನ್ನು ತಮ್ಮ ಸಂಸ್ಥೆಗಳಲ್ಲಿ ನೇಮಿಸಿಕೊಳ್ಳಬೇಕು. ಅದರಿಂದಾಗಿ ಉದ್ಯೋಗಿಗಳ ಮಾನಸಿಕ ಆರೋಗ್ಯ ವೃದ್ದಿಸುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶುಕ್ರವಾರ ಬೆಂಗಳೂರು ವಿವಿ ಮನೋವಿಜ್ಞಾನ ವಿಭಾಗದ ಸುವರ್ಣ ಮಹೋತ್ಸವ ಮತ್ತು ಹಳೇ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನೋವಿಜ್ಞಾನ ಕ್ಷೇತ್ರ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಆಧುನಿಕ ಪ್ರಪಂಚದಲ್ಲಿ ಮನೋವಿಜ್ಞಾನದ ಅನಿವಾರ್ಯತೆ ಹೆಚ್ಚಾಗಿದ್ದು, ಸಂತೋಷ, ನೆಮ್ಮದಿಯನ್ನು ಹುಡುಕುವ ಪರಿಸ್ಥಿತಿ ಎದುರಾಗಿದೆ. ಆ ನಿಟ್ಟಿನಲ್ಲಿ ಮನೋವಿಜ್ಞಾನದ ಪಾತ್ರ ಗಣನೀಯವಾಗಿದೆ ಎಂದರು.

ಪೊಲೀಸರು, ವೈದ್ಯರು, ಖಾಸಗಿ ಕಂಪೆನಿಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಒತ್ತಡದ ಪರಿಸ್ಥಿತಿ ಇರಲಿದೆ. ಮನೋವಿಜ್ಞಾನದ ಸಹಾಯದಿಂದ ಆ ಒತ್ತಡ ನಿರ್ವಹಣೆ ಮಾಡಿ ಉದ್ಯೋಗಿಗಳ ಕಾರ್ಯಕ್ಷಮತೆ, ದಕ್ಷತೆ, ಮಾನಸಿಕ ಸ್ಥಿತಿಯನ್ನು ಹೆಚ್ಚಿಸಬಹುದಾಗಿದೆ. ಪ್ರತಿಯೊಬ್ಬರು ಮಾನಸಿಕ ಸ್ವಾಸ್ಥ್ಯ ಸಾಧಿಸಲು ಪ್ರಯತ್ನಿಸುತ್ತಾರೆ. ವೈಯಕ್ತಿಕ ಬದಲಾವಣೆ ಕಂಡು ಬೆಳವಣಿಗೆ ಸಾಧಿಸಿದರೆ ದೇಶದ ಬೆಳವಣಿಗೆ ಕೂಡ ಸಾಧ್ಯವಾಗುತ್ತದೆ. ವ್ಯಕ್ತಿ ಬದಲಾದರೆ ದೇಶ ಕೂಡ ಬದಲಾಗುತ್ತದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಹಳೆ ಬೇರು, ಹೊಸ ಚಿಗುರು ಎಂಬುವಂತೆ ಹಳೆಯ ವಿದ್ಯಾರ್ಥಿಗಳು ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಬೇಕು. ಹಳೆಯ ವಿದ್ಯಾರ್ಥಿಗಳ ಸಂಘ ಮನೋವಿಜ್ಞಾನ ವಿಭಾಗದ ಬದಲಾವಣೆಗಳು, ವೈಯಕ್ತಿಕ ಅನುಭವಗಳು, ಅಂದಿಗೂ ಇಂದಿಗೂ ಇರುವ ವ್ಯತ್ಯಾಸಗಳ ಬಗ್ಗೆ ಯುವ ಪೀಳಿಗೆಗೆ ತಿಳಿಸಲು ವೇದಿಕೆಯಾಗಿದೆ. ಜ್ಞಾನ ಸಂಪಾದನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ. ನಿವೃತ್ತಿ ನಂತರವೂ ಹಳೆಯ ವಿದ್ಯಾರ್ಥಿಗಳು ವಿಭಾಗದ ಭಾಗವಾಗಿರುವುದು ಸಂತಸದ ವಿಷಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಶೇಕ್ ಲತೀಫ್, ಪ್ರಾಧ್ಯಾಪಕರಾದ ಡಾ.ಶ್ರೀನಿವಾಸ್ ಎಂ, ಡಾ.ಸೌಮ್ಯಶ್ರೀ ಕೆ.ಎನ್, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ಎಚ್.ಎಸ್.ಅಶೋಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News