×
Ad

ಆಸ್ತಿ ತೆರಿಗೆ ವಿನಾಯಿತಿ, ದಂಡ ಕಡಿಮೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

Update: 2024-01-16 16:20 IST

Photo: X/@DKShivakumar

ಬೆಂಗಳೂರು: "ಬೆಂಗಳೂರಲ್ಲಿ ಆಸ್ತಿ ತೆರಿಗೆ ಪಾವತಿ ಕುರಿತ ನೋಟೀಸ್, ದುಬಾರಿ ದಂಡದ ವಿಚಾರವಾಗಿ ಅನೇಕ ದೂರುಗಳು ಬರುತ್ತಿದ್ದು, 30" x 40" ಅಳತೆಯ ನಿವೇಶನ, ಶೆಡ್ ಹೊಂದಿರುವವರಿಗೆ ಆಸ್ತಿ ತೆರಿಗೆ ವಿನಾಯಿತಿ ಹಾಗೂ ದಂಡ ಕಡಿಮೆ ಮಾಡುವ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಯುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಗಾಂಧಿನಗರದ ಶಿರೂರ್ ಉದ್ಯಾನವನದಲ್ಲಿ ಮಂಗಳವಾರ ನಡೆದ "ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ" ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, "ಆಸ್ತಿ ತೆರಿಗೆ ವಿಚಾರದಲ್ಲಿ ಸಮಸ್ಯೆ ಆಗಿದೆ ಎಂಬ ಅನೇಕ ದೂರುಗಳು ಬಂದಿವೆ. ಕಾಲಮಿತಿಯೊಳಗೆ ತೆರಿಗೆ ಪಾವತಿಸಿ ಎಂದು ನೋಟೀಸ್ ಬಂದಿರುವುದರ ಬಗ್ಗೆ ಗಾಬರಿಯಾಗಬೇಡಿ. ದಂಡವನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡುತ್ತೇವೆ. ಈ ಕಾರ್ಯಕ್ರಮ ನಡೆದ ಎಲ್ಲಾ ಕ್ಷೇತ್ರಗಳಲ್ಲೂ ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಲಾಗುತ್ತಿದೆ" ಎಂದರು.

2020 ರಲ್ಲಿ ಜಾರಿಗೆ ಬಂದ ಆಸ್ತಿ ತೆರಿಗೆ ಕುರಿತ ಕಾಯ್ದೆಯಿಂದಾಗಿ ಜನರಿಗೆ ದುಬಾರಿ ದಂಡ ವಿಧಿಸಲಾಗುತ್ತಿದೆ. ಈಗ ಆ ಕಾನೂನಿಗೆ ತಿದ್ದುಪಡಿ ತರಬೇಕಿದೆ. ಕೆಲ ದಿನಗಳಲ್ಲಿ ಈ ತಿದ್ದುಪಡಿ ಬಗ್ಗೆ ಮಾಹಿತಿ ನೀಡಲಾಗುವುದು. ನಮ್ಮ ಸರ್ಕಾರವೇ ಸಮೀಕ್ಷೆ ಮಾಡಿಸಿ, ನಿಮ್ಮ ಮನೆ ಬಾಗಿಲಿಗೇ ನಿಮ್ಮ ಸ್ವತ್ತಿನ ದಾಖಲೆಗಳನ್ನು ಉಚಿತವಾಗಿ ತಂದು ಕೊಡಲಾಗುವುದು ಎಂದು ಹೇಳಿದರು.

ಎಲ್ಲರೂ ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿ ಬರಬೇಕು. ಜನರಿಗೂ ಅನುಕೂಲ ಆಗಬೇಕು, ಪಾಲಿಕೆಗೂ ಆದಾಯ ಬರಬೇಕು. ನಿಮ್ಮ ತೆರಿಗೆ ಹಣವಿಲ್ಲದೆ ಬೆಂಗಳೂರು ಅಭಿವೃದ್ಧಿ ಅಸಾಧ್ಯ. ನಾವು ಇಷ್ಟು ದಿನ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ ಅಳವಡಿಸಿಕೊಂಡು ಬಂದಿದ್ದೇವೆ. ಆದರೆ ಈ ವ್ಯವಸ್ಥೆಯಲ್ಲಿ ಜನ ತಮ್ಮ ಆಸ್ತಿಗೆ ತಕ್ಕಂತೆ ತೆರಿಗೆ ಪಾವತಿ ಮಾಡುತ್ತಿಲ್ಲ. ಮೂರು ಅಂತಸ್ತಿನ ಮನೆ ಇದ್ದರೆ ಒಂದು ಅಂತಸ್ತು ಎಂದು ತೋರಿಸಿ ಕಡಿಮೆ ತೆರಿಗೆ ಕಟ್ಟುತ್ತಿದ್ದಾರೆ. ನಮ್ಮ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.

ನಿಮ್ಮ ಅಹವಾಲು ಬಗೆಹರಿಸಲು ಪ್ರತ್ಯೇಕ ತಂಡ ರಚಿಸುತ್ತೇವೆ. ನೀವು ಕೊಟ್ಟಿರುವ ಅರ್ಜಿಗಳನ್ನು ವಿಂಗಡಿಸಿ, ಅವುಗಳನ್ನು ಕಾನೂನು ವ್ಯಾಪ್ತಿಯಲ್ಲಿ ಬಗೆಹರಿಸುತ್ತೇವೆ. ನಿಮ್ಮ ದೂರವಾಣಿ ಸಂಖ್ಯೆಗೆ ಪಾಲಿಕೆ ಅಧಿಕಾರಿಗಳು ಸಂಪರ್ಕಿಸುತ್ತಾರೆ ಹೇಳಿದರು.

ತಳ್ಳುವ ಗಾಡಿಯಲ್ಲಿ ಮಾತ್ರ ಬೀದಿ ವ್ಯಾಪಾರಕ್ಕೆ ಅವಕಾಶ:

ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಮಾಡಬಾರದು ಎಂದು ಹೇಳುವುದಿಲ್ಲ. ನೀವು ನೋಂದಣಿ ಮಾಡಿಸಿಕೊಂಡು, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡಬೇಕು. ಪಾದಚಾರಿ ಮಾರ್ಗದಲ್ಲಿ ಅಂಗಡಿ ಹಾಕಿಕೊಂಡರೆ ಜನ ಸಾಮಾನ್ಯರು ಎಲ್ಲಿ ಓಡಾಡಬೇಕು ಎಂದು ಪ್ರಶ್ನಸಿದರು.

ಅನಧಿಕೃತ ಫ್ಲೆಕ್ಸ್ ವಿರುದ್ಧ ಪ್ರಕರಣ:

ನಾವು ಅನಧಿಕೃತ ಜಾಹೀರಾತು ಫ್ಲೆಕ್ಸ್ ಗಳ ನಿಷೇಧ ಮಾಡಿದ್ದೇವೆ. ನನ್ನ ಮನೆ ಬಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಹಬ್ಬ, ಹೊಸವರ್ಷದ ಶುಭಾಶಯಗಳ ಫ್ಲೆಕ್ಸ್ ಹಾಕಲಾಗಿದೆ. ಇವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಯಾವುದೇ ಪಕ್ಷದವರಾಗಿರಲಿ, ನನ್ನ ಫೋಟೋ ಹಾಕಿರಲಿ ಅಥವಾ ಬೇರೆಯವರ ಫೋಟೋ ಹಾಕಿರಲಿ ಎಲ್ಲ ಅನಧಿಕೃತ ಫ್ಲೆಕ್ಸ್ ತೆರವು ಮಾಡಬೇಕು ಎಂದು ಸೂಚಿಸಿದ್ದೇನೆ. ಮುಂದೆ ಇದನ್ನು ನಿಯಂತ್ರಿಸಲು ಹೊಸ ಜಾಹೀರಾತು ನೀತಿ ತರಲಾಗುವುದು ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News