‘ಬಿಹಾರ ಫಲಿತಾಂಶ’ ಮತದಾರರ ತೀರ್ಪಿಗೆ ತಲೆಬಾಗುತ್ತೇವೆ : ಡಿ.ಕೆ.ಶಿವಕುಮಾರ್
ಬೆಂಗಳೂರು : ಬಿಹಾರ ಚುನಾವಣೆಯಲ್ಲಿ ಏನೇ ಫಲಿತಾಂಶ ಬಂದರೂ ಮತದಾರರ ತೀರ್ಪಿಗೆ ನಾವು ತಲೆಬಾಗುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶುಕ್ರವಾರ ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಜನ ತಮ್ಮ ಆದೇಶ ನೀಡಿದ್ದು, ಅದನ್ನು ಪಾಠವಾಗಿ ಪರಿಗಣಿಸುತ್ತೇವೆ. ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟಕ್ಕೆ ಹೊಸ ತಂತ್ರಗಾರಿಕೆ ರೂಪಿಸುತ್ತೇವೆ ಎಂದು ತಿಳಿಸಿದರು.
ಬಿಹಾರದಲ್ಲಿ ಎನ್‍ಡಿಎ ಸರಕಾರ ಮಹಿಳೆಯರ ಖಾತೆಗೆ 10 ಸಾವಿರ ರೂ. ಹಾಕಿದ್ದು, ಮಹಿಳೆಯರ ಮತ ಪ್ರಮಾಣ ಶೇ.11ರಷ್ಟು ಏರಿಕೆಯಾಗಿದೆ. ಇದು ಫಲಿತಾಂಶಕ್ಕೆ ಕಾರಣವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಇನ್ನು ವಿವರವಾಗಿ ಪರಿಶೀಲನೆ ಮಾಡುತ್ತೇನೆ. ಆನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.
ತುಂಗಭದ್ರಾ ಐಸಿಸಿ ಸಭೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ತುಂಗಭದ್ರಾ ಅಣೆಕಟ್ಟಿನ ಗೇಟ್ ಗಳ ದುರಸ್ಥಿ ನಡೆಯುವವರೆಗೂ ಇರುವ ನೀರನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬ ವಿಚಾರದ ಬಗ್ಗೆ ಅವರಿಗೆ ತೀರ್ಮಾನ ಮಾಡಲು ಬಿಟ್ಟಿದ್ದೇವೆ. ಉಳಿದಂತೆ ಕಾಲುವೆಗಳ ದುರಸ್ಥಿ ಕಾಮಗಾರಿ ಕೈಗೆತ್ತಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.