×
Ad

ಐದು ಸಂಶೋಧನಾ ಸಂಸ್ಥೆಗಳಿಂದ ಸರಕಾರದ ಗ್ಯಾರಂಟಿ ಯೋಜನೆಗಳ ಅಧ್ಯಯನ: ನ.5ಕ್ಕೆ ಅವಲೋಕನ ಕಾರ್ಯಕ್ರಮ

Update: 2025-11-03 09:57 IST

ಬೆಂಗಳೂರು, ನ.3: ಕರ್ನಾಟಕ ಸರಕಾರ ಜಾರಿಗೆ ತಂದಿರುವ ಐದು ಖಾತರಿ (ಗ್ಯಾರಂಟಿ) ಯೋಜನೆಗಳ ಕುರಿತು ಪ್ರತಿಷ್ಠಿತ ಐದು ಸಂಶೋಧನಾ ಸಂಸ್ಥೆಗಳು ಕೈಗೊಂಡಿರುವ ಅಧ್ಯಯನಗಳ ಸಂಶೋಧನಾ ಫಲಿತಾಂಶಗಳನ್ನು ಮತ್ತು ಕಾರ್ಯನೀತಿ ಸಲಹೆಗಳನ್ನು ಭಾಗೀದಾರ (Stakeholders) ಸರಕಾರಿ ಇಲಾಖೆಗಳೊಂದಿಗೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ತಜ್ಞರೊಂದಿಗೆ ಹಂಚಿಕೊಳ್ಳಲು ನ.5ರಂದು ಬೆಂಗಳೂರಿನ ಎಂ.ಜಿ. ರಸ್ತೆಯ ಹೋಟೆಲ್ ತಾಜ್ ನ ಟ್ರಿನಿಟಿ ಸಭಾಂಗಣದಲ್ಲಿ ಒಂದು ದಿನದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಎಂ.ಎಸ್ ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಯ ಅಧ್ಯಕ್ಷೆ ಡಾ.ಸೌಮ್ಯಾ ಸ್ವಾಮಿನಾಥನ್ ಪ್ರಧಾನ ಭಾಷಣ ಮಾಡಲಿದ್ದು, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸರಕಾರಿ ಖಾತರಿ ಯೋಜನೆಗಳ ಕಾರ್ಯನೀತಿ ಸನ್ನಿವೇಶವನ್ನು ವಿವರಿಸಲಿದ್ದಾರೆ.

ಬೆಂಗಳೂರಿನಲ್ಲಿರುವ ರಾಜ್ಯದ ವಿತ್ತೀಯ ಕಾರ್ಯನೀತಿ ಸಂಸ್ಥೆ (ಎಫ್.ಪಿ.ಐ)ಯು ಆರ್ಥಿಕ ಇಲಾಖೆಯ ಅಧೀನದಲ್ಲಿರುವ ನಿರ್ದೇಶನಾಲಯವಾಗಿದ್ದು, ಸರಕಾರಿ ಖಾತರಿ ಯೋಜನೆಗಳ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಾತ್ಮಕ ಮೌಲ್ಯಮಾಪನ ನಡೆಸಲು ಈ ಐದು ಸಂಶೋಧನಾ ಸಂಸ್ಥೆಗಳ ಜೊತೆ ಸಹಭಾಗಿತ್ವವನ್ನು ಹೊಂದಿರುತ್ತದೆ.

ಲಂಡನ್ ನ ಕಿಂಗ್ಸ್ ಕಾಲೇಜು, ಮುಂಬೈನ ಎಕ್ಸ್.ಕೆ.ಡಿ.ಆರ್. ಫೋರಂ ಮತ್ತು ಅಝೀಂ ಪ್ರೇಮ್ ಜಿ ವಿಶ್ವವಿದ್ಯಾನಿಲಯ, ಲೋಕ್ ನೀತಿ-ಸಿಎಸ್ ಡಿಎಸ್ ಮತ್ತು ಇಂಡಸ್ ಆಕ್ಷನ್ ಹಾಗೂ ಜಸ್ಟ್ ಜಾಬ್ಸ್ ನೆಟ್ ವರ್ಕ್ಸ್ ಸಂಶೋಧನಾ ಸಂಸ್ಥೆಗಳು ಖಾತರಿ(ಗ್ಯಾರಂಟಿ) ಯೋಜನೆಗಳ ಕುರಿತು ಅಧ್ಯಯನವನ್ನು ಕೈಗೊಂಡಿರುತ್ತವೆ.

ವಿವಿಧ ತಾಂತ್ರಿಕ ಅಧಿವೇಶನಗಳು:

ಈ ಕಾರ್ಯಕ್ರಮವು ವಿವಿಧ ತಾಂತ್ರಿಕ ಅಧಿವೇಶನಗಳನ್ನು ಒಳಗೊಂಡಿರುತ್ತದೆ. ಸರ್ಕಾರದ ಖಾತರಿ ಯೋಜನೆಗಳ ಅನು಼ಷ್ಠಾನದಲ್ಲಿ ಇ-ಆಡಳಿತದ ಪಾತ್ರ, ಸರಕಾರದ ಐದು ಖಾತರಿ ಯೋಜನೆಗಳ ಪರಿಣಾಮಾತ್ಮಕ ಮೌಲ್ಯಮಾಪನ ಶಕ್ತಿ ಯೋಜನೆಯ ಪರಿಣಾಮಾತ್ಮಕ ಮೌಲ್ಯಮಾಪನ ಮತ್ತು ತಜ್ಞರ ಚರ್ಚೆ ನಡೆಯಲಿದೆ. ಪ್ರತೀ ಅಧಿವೇಶನದಲ್ಲಿ ಸರಕಾರದ ಉನ್ನತ ಅಧಿಕಾರಿಗಳು ಹಾಗೂ ಪ್ರಮುಖ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ತಜ್ಞರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಸಮಾರೋಪ ಭಾಷಣವನ್ನು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ದಿ ಆಯುಕ್ತೆ ಉಮಾ ಮಹಾದೇವನ್ ನೆರವೇರಿಸಲಿದ್ದು, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಕಾರ್ಯಕ್ರಮವು ಐದು ಸಂಶೋಧನಾ ಸಂಸ್ಥೆಗಳು ನಡೆಸಿದ ಸರಕಾರಿ ಖಾತರಿ ಯೋಜನೆಗಳ ಸಂಶೋಧನಾ ಅಧ್ಯಯನಗಳ ಕುರಿತು ಮೌಲ್ಯಯುತ ಮಾಹಿತಿಯನ್ನು ಒದಗಿಸುವುದರೊಂದಿಗೆ ಸರಕಾರಿ ಖಾತರಿ ಯೋಜನೆಗಳ ಕಾರ್ಯನೀತಿ ವಿನ್ಯಾಸ, ಅನುಷ್ಠಾನ ಹಾಗೂ ನಿರೀಕ್ಷಿತ ಪರಿಣಾಮಗಳ ಅವಲೋಕನವನ್ನು ಸಹ ಒದಗಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News