ತಾಯಿಯನ್ನು ಕಬಳಿಸಲು ಹೊರಟಿರುವ ಸರಕಾರಗಳು ಉಳಿಯುವುದಿಲ್ಲ: ನ್ಯಾ.ಗೋಪಾಲಗೌಡ
ಬೆಂಗಳೂರು : ಭೂಮಿ ನಮಗೆ ತಾಯಿ ಇದ್ದಹಾಗೆ. ತಾಯಿಯನ್ನೇ ಕಬಳಿಸಲು ಹೊರಟಿರುವ ಸರಕಾರಗಳು ಉಳಿಯುವುದಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದ್ದಾರೆ.
ಸೋಮವಾರ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ಕೆಐಎಡಿಬಿ ಭೂಸ್ವಾಧೀನವನ್ನು ವಿರೋಧಿಸಿ ಸಾವಿರನೇ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ರೈತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
140 ಕೋಟಿ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರಿದ್ದಾರೆ. ಹೋರಾಟ ಗೆಲ್ಲಬೇಕೆಂದರೆ, ಸರಕಾರದ ಗಮನ ಸೆಳೆಯಬೇಕಾದರೆ ಮಹಿಳೆಯರು ಮುಂದಾಳತ್ವ ವಹಿಸಬೇಕೆಂದು ಹೇಳಿದ್ದೆ. ಅದು ಇಂದು ಋಜುವಾತಾಗಿದೆ. ಸರಕಾರ ಪತನವಾಗಬೇಕಾದರೆ ಮಹಿಳೆಯರ ನಾಯಕತ್ವ ಮುಖ್ಯ ಎಂದು ಅವರು ಹೇಳಿದರು.
ಸರಕಾರಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸರಕಾರ ಜನರಿಂದ, ಜನರಿಗಾಗಿ ಜನರಿಗಾಗಿಯೇ ಇರಬೇಕು, ಇದು ಪ್ರಜಾಪ್ರಭುತ್ವ. ಇದು ಸಂಸದೀಯ ಪ್ರಜಾಪ್ರಭುತ್ವ. ಜನಪರ ನೀತಿಗಳು ಇಲ್ಲದಿದ್ದರೆ ಸರಕಾರ ಅಧಃಪತನವಾಗುತ್ತದೆ. ಜನ ಎಂದರೆ ರೈತರು, ಕೃಷಿ ಕಾರ್ಮಿಕರು, ಕಾರ್ಮಿಕರು. ಜನರು ಮತ ಕೊಟ್ಟಿದ್ದರಿಂದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಅದು ಜವಾಬ್ದಾರಿಯುತ ಸರಕಾರ ಆಗಿರುವುದಿಲ್ಲ. ಅಂತಹ ಸರಕಾರ ನಮಗೆ ಬೇಕಿಲ್ಲ ಎಂದು ಗೋಪಾಲಗೌಡ ಆಕ್ರೋಶ ವ್ಯಕ್ತಪಡಿಸಿದರು.
ಬಂಡವಾಳಶಾಹಿಗಳನ್ನು ಕರೆತಂದು ಕೈಗಾರಿಕೆ ಸ್ಥಾಪನೆ ಮಾಡುತ್ತೇವೆಂದು ಹೇಳುತ್ತಾರೆ. ಕೃಷಿ ಕೂಡ ಕೈಗಾರಿಕೆ ಎಂಬುದನ್ನು ಮರೆಯಬಾರದು. ಕೃಷಿಕರಿಗೂ ಮೂಲಭೂತ ಹಕ್ಕಿದೆ ಎಂದು ಸಂವಿಧಾನ ಹೇಳುತ್ತದೆ. ಕೃಷಿಯೇ ಕೈಗಾರಿಕೆ ಆಗಿರುವಾಗ ನಮಗೆ ಬೇರೆ ಕೈಗಾರಿಕೆ ಯಾಕೆ ಬೇಕು? ಎಲ್ಲ ಭೂಮಿಯನ್ನು ಕೈಗಾರಿಕೆಗೆ ಕೊಟ್ಟರೆ ದ್ರಾಕ್ಷಿ, ರೇಷ್ಮೇ ಹಾಗೂ ಹಾಲು ಉತ್ಪಾದನೆ ಎಲ್ಲಿ ಮಾಡುತ್ತೀರಿ? ಇದಕ್ಕೆ ಸರಕಾರದ ಬಳಿ ಉತ್ತರ ಇದೆಯಾ? ಜನರನ್ನು ಮೋಸ ಮಾಡುವ ಹುನ್ನಾರ ಮಾಡಬಾರದು ಎಂದು ಅವರು ಕಿಡಿಗಾರಿದರು.
ಸರಕಾರವನ್ನು ನಡೆಸುವುದು ಕಾರ್ಯದರ್ಶಿಯಾ? ಮುಖ್ಯಮಂತ್ರಿಯಾ? ಜನರಿಗೆ ಉತ್ತರ ಕೊಡುವುದು ಯಾರು? ಅಡ್ವೋಕೇಟ್ ಜನರಲ್ ಕೆಲಸವೆಂದರೆ ನಿಮ್ಮ ಕಾನೂನು ಕಟ್ಟಳೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸುವುದಷ್ಟೇ. ಕಾನೂನಿನ ಸಲಹೆ ನೀಡುವುದು ಅವರ ಕೆಲಸ ಅಲ್ಲ. ದಾರಿ ತಪ್ಪಿಸುವ ಕೆಲಸವನ್ನು ನಿಲ್ಲಿಸಲೇಬೇಕು. ನಿಮ್ಮ ಮಾತುಗಳನ್ನೆಲ್ಲಾ ನಾವು ಒಪ್ಪುತ್ತೇವೆಂದುಕೊಳ್ಳುವುದು ಮೂರ್ಖತನ. ಪೆÇಲೀಸರ ದಬ್ಬಾಳಿಕೆಗಳಿಂದ ಹೋರಾಟ ದಮನ ಮಾಡುತ್ತೇವೆಂದುಕೊಂಡರೆ ಯಾವುದೇ ಸರಕಾರವನ್ನು ಮುಂದುವರಿಸುವುದಕ್ಕೆ ಜನರು ಬಿಡುವುದಿಲ್ಲ ಎಂದು ಗೋಪಾಲಗೌಡ ಎಚ್ಚರಿಕೆ ನೀಡಿದರು.
ನಮಗೆ ನಾವೇ ರಕ್ಷಣೆ, ನಮಗೆ ಪೊಲೀಸರ ರಕ್ಷಣೆ ಬೇಕಾಗಿಲ್ಲ. ಧರಣಿ ಕೂತಾಗ, ಹೋರಾಟ ಮಾಡುವಾಗ ಟ್ರಾಕ್ಟರ್ ಮೆರವಣಿಗೆ ಸಂದರ್ಭದಲ್ಲಿ ಪೊಲೀಸರು ರೈತರ ಮೇಲೆ ನಡೆಸಿದ ದಬ್ಬಾಳಿಕೆ ನಮಗೆ ಗೊತ್ತಿದೆ. ಪೊಲೀಸರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಲಾಠಿ ಚಾರ್ಜ್ ಮಾಡಿದರೆ ನಿಮ್ಮ ಮೇಲೆ ಕೇಸ್ ದಾಖಲಿಸಬೇಕಾಗುತ್ತದೆ. ನಾವು ಹಾಗೂ ನ್ಯಾಯಾಲಯಗಳು ಇನ್ನೂ ಸತ್ತಿಲ್ಲ. ನೂರಾರು ವಕೀಲರು ಉಚಿತವಾಗಿ ಕೆಲಸ ಮಾಡಲು ತಯಾರಿದ್ದಾರೆ. ಪ್ರಧಾನಿ ಹಾಗೂ ಮುಖ್ಯಮಂತ್ರಿ ಅಧಿಕಾರ ವ್ಯಾಪ್ತಿ ಮೀರಿದರೆ, ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ ಎಂದು ಗೋಪಾಲಗೌಡ ಹೇಳಿದರು.
ಹೋರಾಟದಲ್ಲಿ ನಟ ಪ್ರಕಾಶ್ ರೈ, ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ, ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕರ್ನಾಟಕ ಜನಶಕ್ತಿಯ ಅಧ್ಯಕ್ಷ ನೂರ್ ಶ್ರೀಧರ್, ಭೂಸ್ವಾಧೀನ ಹೋರಾಟ ಸಮಿತಿಯ ಕಾರೆಹಳ್ಳಿ ಶ್ರೀನಿವಾಸ್, ಭೂಮಿ, ವಸತಿ ಹಕ್ಕು ವಂಚಿತರ ಹೋರಾಟದ ಗೌರವಾಧ್ಯಕ್ಷ ಸಿರಿಮನೆ ನಾಗರಾಜ್, ರೈತ ಹೋರಾಟಗಾರ ವೀರಸಂಗಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದು ಕೇವಲ ಚನ್ನರಾಯಪಟ್ಟಣದ 13 ಗ್ರಾಮಗಳ ಹೋರಾಟವಲ್ಲ. ಈ ನಾಡಿನ ರೈತರ ಸಂಸ್ಕøತಿಯನ್ನು ಉಳಿಸುವುದಕ್ಕೆ ನಡೆಸುತ್ತಿರುವ ಸಂಘರ್ಷ. ನಮಗೆ ಯಾವ ಅಭಿವೃದ್ಧಿ ಮಾದರಿ ಬೇಕು ಎಂಬುದನ್ನು ನಮ್ಮನ್ನು ಆಳುತ್ತಿರುವ ಸರಕಾರಕ್ಕೆ ಬೇಕಿಲ್ಲ. ರೈತರು ಮಾಡುತ್ತಿರುವುದು ನಿಜವಾದ ಅಭಿವೃದ್ಧಿ ಎಂದು ತೋರಿಸುವುದಕ್ಕೆ ಈ ಹೋರಾಟ.
-ಚುಕ್ಕಿ ನಂಜುಂಡಸ್ವಾಮಿ, ರೈತ ಹೋರಾಟಗಾರ್ತಿ
‘ರೈತರ ಬವಣೆಗಳನ್ನು ಬಾಲ್ಯದಲ್ಲಿ ಕಂಡವರು, ಅಕ್ಷರ ಕಲಿತ ನಂತರ ಅದಕ್ಕೆ ಪರಿಹಾರ ಹುಡುಕಬೇಕಿತ್ತು. ಆದರೆ, ಅವರು ಆ ಕಣ್ಣು ಕಳೆದುಕೊಂಡು ಕನ್ನಡಕ ಹಾಕಿಕೊಂಡಿದ್ದಾರೆ. ನೆನಪು ಹಾಗೂ ಕಿವಿ ಎರಡನ್ನೂ ಕಳೆದುಕೊಂಡಿದ್ದಾರೆ. ವಿಧಾನಸೌಧದಲ್ಲಿ ಇರುವ ಬಹುತೇಕರು ರೈತರ ಮಕ್ಕಳೆ. ಅವರು ತಮ್ಮ ಅಂತಃಸಾಕ್ಷಿಯನ್ನು ಎಚ್ಚರಿಸಿಕೊಳ್ಳುವ ರೀತಿಯಲ್ಲಿ, ಹಳೆಯ ನೆನಪನ್ನು ಜಾಗೃತಿಯಲ್ಲಿ ಇಟ್ಟುಕೊಂಡು ರೈತರ ಬವಣೆ ನೋಡಬೇಕು. ತಮ್ಮ ಆತ್ಮಸಾಕ್ಷಿ ಎಚ್ಚರದಲ್ಲಿಟ್ಟುಕೊಂಡು ಮಾತನಾಡಬೇಕು. ದೇಶಕ್ಕೆ ಪ್ರಗತಿ ಬೇಕು ಹೌದು. ಆದರೆ, ಸಂಸ್ಕøತಿ, ಇತಿಹಾಸ ಹಾಗೂ ಬದುಕಿನ ನಾಶದ ಮೂಲಕ ಅಲ್ಲ’.
-ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ
‘‘ನೋಟಿಫೀಕೇಶನ್ ಆಗಿದೆ, ಏನು ಮಾಡುವುದುಕ್ಕೆ ಸಾಧ್ಯವಿಲ್ಲ’ ಎಂದು ಸರಕಾರ ಹೇಳಿದೆ. ಆದರೆ, ಇದು ನಾವೇ ಮಾಡಿಕೊಂಡ ವ್ಯವಸ್ಥೆ ಎಂಬುದನ್ನು ಮರೆಯಬಾರದು. ಯಾವುದೇ ಸರಕಾರ ಬದಲಾದರೂ ನಮ್ಮ ಬದುಕು ಬದಲಾಗಿಲ್ಲ. ಸಾವಿರ ದಿನ ಹೋರಾಟ ಇಡೀ ರಾಜ್ಯಕ್ಕೆ ಮಾದರಿ. ಕರ್ನಾಟಕದ ಮೂಲೆ ಮೂಲೆಗಳಿಂದ ರೈತರನ್ನು ಸಂಘಟಿಸುವ ಕೆಲಸ ಮಾಡುತ್ತೇವೆ. ಈ ಹೋರಾಟ ಇಡೀ ದೇಶದ ರೈತರ ಪ್ರಶ್ನೆ. ಸೋತರೆ ಇಡೀ ದೇಶದ ರೈತರು ಸೋತಂಗೆ. ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ತಕ್ಷಣವೇ ಭೂ ಸ್ವಾಧೀನ ಕೈಬಿಡಬೇಕು. ಸರಣಿ ಸಭೆಗಳನ್ನು ನಡೆಸುತ್ತಿರುವುದು ಯಾಕೆ? ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು’.
-ವೀರಸಂಗಯ್ಯ, ರೈತ ಹೋರಾಟಗಾರ