×
Ad

‘ದ್ವೇಷ ಭಾಷಣ ತಡೆ ವಿಧೇಯಕ’ ರಾಷ್ಟ್ರಪತಿ ಪರಿಶೀಲನೆಗೆ ರವಾನಿಸಿದ ರಾಜ್ಯಪಾಲರು

Update: 2026-02-02 18:20 IST

ಬೆಂಗಳೂರು : ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆಯೂ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಸಿದ್ದ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ)ವಿಧೇಯಕ’ಕ್ಕೆ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅಂಕಿತ ಹಾಕದೆ, ರಾಷ್ಟ್ರಪತಿಗೆ ರವಾನಿಸಿದ್ದಾರೆ.

‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ)ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕದೆ ರಾಷ್ಟ್ರಪತಿಯವರಿಗೆ ವಿಧೇಯಕದ ಪರಿಶೀಲನೆಗಾಗಿ ಕಳುಹಿಸಿದ್ದಾರೆ. ರಾಜ್ಯಪಾಲರ ಈ ನಿರ್ಧಾರ ಸರಕಾರದಿಂದ ಟೀಕೆಗೆ ಗುರಿಯಾಗಿದ್ದು, ಒಂದು ರೀತಿಯಲ್ಲಿ ಸರಕಾರಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಧೇಯಕಕ್ಕೆ ಸಂಬಂಧಿಸಿದಂತೆ ಒಟ್ಟು 29 ಪ್ರಮುಖ ಕಾರಣಗಳನ್ನು ಉಲ್ಲೇಖಿಸಿದ್ದು, ರಾಷ್ಟ್ರಪತಿಗೆ ರವಾನೆ ಮಾಡಿದ್ದಾರೆ. ಇದರಿಂದ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ)ವಿಧೇಯಕ’ ಮತ್ತೊಮೆ ರಾಷ್ಟ್ರಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ. ಅಲ್ಲದೆ, ರಾಜ್ಯಪಾಲರು ಹಾಗೂ ಆಡಳಿತಾರೂಢ ಕಾಂಗ್ರೆಸ್ ಸರಕಾರದ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ಬಂದಿದೆ.

ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ ಎಂದು ರಾಜ್ಯಪಾಲರು ಹೇಳಿದ್ದು, ಈ ಅಸ್ಪಷ್ಟತೆಯಿಂದ ಧರ್ಮ, ಜಾತಿ, ಜನಾಂಗ, ವ್ಯಕ್ತಿಗಳ ಮೇಲೆ ಪೂರ್ವಾಗ್ರಹದಿಂದ ಕ್ರಮ ಜರುಗುವ ಸಾಧ್ಯತೆಯನ್ನು ಹೆಚ್ಚಿಸಲಿದೆ. ವಿಧೇಯಕವನ್ನು ಉಭಯ ಸದನಗಳಲ್ಲಿ ಸಮಗ್ರ ಚರ್ಚೆಗೆ ಒಳಪಡಿಸದೇ ಅಂಗೀಕರಿಸಲಾಗಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News