ಕಾನೂನು ಸೇವೆಗಳನ್ನು ಜನರಿಗೆ ತಲುಪಿಸಲು ಅರೆಕಾಲಿಕ ಕಾನೂನು ಸ್ವಯಂ ಸೇವಕರ ನೇಮಕಕ್ಕೆ ತೀರ್ಮಾನ : ಎಚ್.ಶಶಿಧರ ಶೆಟ್ಟಿ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ.23: ಕಾನೂನು ಸೇವೆಗಳನ್ನು ಜನರಿಗೆ ತಲುಪಿಸುವ ಹಾಗೂ ಅವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು (ಅಧಿಕಾರ ಮಿತ್ರರು) ಒಂದು ವರ್ಷದ ಅವಧಿಗೆ ರಾಜ್ಯಾದ್ಯಂತ ನೇಮಿಸಲು ಕರ್ನಾಟಕ ರಾಜ್ಯ ಕಾನೂನು ಸೇವಗಳ ಪ್ರಾಧಿಕಾರ ತೀರ್ಮಾನಿಸಿದೆ ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ ತಿಳಿಸಿದ್ದಾರೆ.
ಮಂಗಳವಾರ ನಗರದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ‘ಅರೆಕಾಲಿಕ ಕಾನೂನು ಸ್ವಯಂ ಸೇವಕರ’ ಯೋಜನೆಯಡಿ ಈ ಕಾನೂನು ಸ್ವಯಂ ಸೇವಕರ ನೇಮಕ ಮಾಡಿಕೊಂಡು, ಅವರಿಗೆ ತರಬೇತಿಯನ್ನು ನೀಡಲಾಗುವುದು. ಅರೆಕಾಲಿಕ ಕಾನೂನು ಸ್ವಯಂ ಸೇವಕರು ಸಾಮಾನ್ಯ ಜನರು ಮತ್ತು ಸೇವಾ ಸಂಸ್ಥೆಗಳ ನಡುವಿನ ಸಂಪರ್ಕ ಕೊಂಡಿಗಳಾಗಿ ಕೆಲಸ ನಿರ್ವಹಿಸುತ್ತಾರೆ ಎಂದು ಹೇಳಿದರು.
ಪ್ರತಿ ತಾಲೂಕು ಕಾನೂನು ಸೇವೆಗಳ ಸಮಿತಿ, ಗರಿಷ್ಠ 25-50 ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ 50ರಿಂದ 100 ಸಕ್ರಿಯ ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು ಹೊಂದಬಹುದು. ರಾಜ್ಯದಲ್ಲಿ 2024ನೇ ಸಾಲಿನಲ್ಲಿ ಒಟ್ಟು 5,343 ಅರೆಕಾಲಿಕ ಕಾನೂನು ಸೇವಕರನ್ನು ಒಂದು ವರ್ಷದ ಅವಧಿಗೆ ನೇಮಿಸಲಾಗಿದ್ದು, ಇವರ ಅವಧಿ ನ.20ಕ್ಕೆ ಮುಕ್ತಾಯಗೊಳ್ಳುತ್ತದೆ ಎಂದು ಮಾಹಿತಿ ನೀಡಿದರು.
ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು ಹೊಸದಾಗಿ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅ.20ರೊಳಗಾಗಿ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು. ಇವರು ಕಾರ್ಯನಿರ್ವಹಿಸಲು ಕನಿಷ್ಠ ಎಸ್ಸೆಸೆಲ್ಸಿ ಪೂರ್ಣಗೊಳಿಸಿರಬೇಕು. ಯಾವುದೇ ರೀತಿಯ ಆದಾಯ ನಿರೀಕ್ಷಿಸದೇ ಎಲ್ಲಾ ವರ್ಗದ ದುರ್ಬಲರಿಗೆ ಸಹಾನುಭೂತಿಯಿಂದ ಸಹಾಯ ಮಾಡುವ ಮನಸ್ಥಿತಿ ಹೊಂದಿರಬೇಕಾಗಿರುತ್ತದೆ ಎಂದರು.
ಅರೆಕಾಲಿಕ ಕಾನೂನು ಸ್ವಯಂ ಸೇವಕರಾಗಿ ಶಿಕ್ಷಕರು, ನಿವೃತ್ತ ಶಿಕ್ಷಕರು, ಹಿರಿಯ ನಾಗರಿಕರು, ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ಕಾನೂನು ವಿದ್ಯಾರ್ಥಿಗಳು, ಸ್ವಸಹಾಯ ಗುಂಪಿನವರು, ನಿವೃತ್ತ ಸೈನಿಕರು ಹೀಗೆ ಎಲ್ಲಾ ಕ್ಷೇತ್ರದ ಜನರು ನೇಮಕಗೊಳ್ಳಬಹುದು. ಇವರ ಆಯ್ಕೆಗಾಗಿ ಜಿಲ್ಲಾ ಹಾಗೂ ತಾಲೂಕು ಹಂತದಲ್ಲಿ ಆಯಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.
ಸ್ಥಳೀಯ ನಿವಾಸಿಗಳಿಂದ ಅರ್ಜಿಗಳನ್ನು ಆಯಾ ಜಿಲ್ಲೆ, ತಾಲೂಕು ಕಾನೂನು ಸೇವಾ ಪ್ರಾಧಿಕಾರದಿಂದ ಅರ್ಜಿ ಆಹ್ವಾನಿಸಿ, ಸ್ವೀಕರಿಸಿ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತದೆ. ಆಯ್ಕೆ ಸಮಿತಿಯು ತನ್ನ ವಿವೇಚನಾಧಿಕಾರವನ್ನು ಬಳಸಿ ಸೂಕ್ತ ಅಭ್ಯರ್ಥಿಗಳನ್ನು ಅರೆಕಾಲಿಕ ಕಾನೂನು ಸ್ವಯಂ ಸೇವಕನ್ನಾಗಿ ಆಯ್ಕೆ ಮಾಡುತ್ತದೆ ಎಂದು ಮಾಹಿತಿ ನೀಡಿದರು. ಅವರಿಗೆ ದಿನಕ್ಕೆ 750 ರೂ. ಗೌರವ ಧನವನ್ನು ಸಹ ನಿಡಲಾಗುವುದು ಎಂದು ತಿಳಿಸಿದರು.
ಆಯ್ಕೆಯಾದ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಜನರಿಗೆ ಕಾನೂನು ಅರಿವು ಮೂಡಿಸುವುದು, ಬಾಲ್ಯ ವಿವಾಹ ತಡೆ, ಮಾದಕ ವಸ್ತು ಕಳ್ಳ ಸಾಗಣೆ ತಡೆ, ಮಾಹಿತಿ ಸಂಗ್ರಹ ಲೋಕ ಅದಾಲತ್ ಮಧ್ಯಸ್ಥಿಕೆ ಮಾಹಿತಿ, ಜೀತಪದ್ಧತಿ ನಿವಾರಣೆ ಸೇರಿ ವಿವಿಧ ಕಾನೂನು ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಆಯ್ಕೆಯಾದ ಇವರಿಗೆ ತರಬೇತಿ ನೀಡಲು ಔಟ್ ಲಾಡ್ ಇಂಡಿಯಾ ಹಾಗೂ ನ್ಯಾಯ ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಉಪಕಾರ್ಯದರ್ಶಿ ಎಂ.ಶ್ರೀಧರ, ಸಾರ್ವಜನಿಕ ಸಂಪರ್ಕಾಧಿಕಾರಿ ಬಾಲಸುಬ್ರಹ್ಮಣಿ ಮತ್ತಿತರರು ಉಪಸ್ಥಿತರಿದ್ದರು.
1ಕೋಟಿ 11ಲಕ್ಷ ಪ್ರಕರಣ ಇತ್ಯರ್ಥ :
ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಸೆ.13ರಂದು ಲೋಕ್ ಅದಾಲತ್ ನಡೆಸಿ, 1 ಕೋಟಿ 11 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ. 53 ಲಕ್ಷ ಟ್ರಾಫಿಕ್ ಚಲನ್ ಪ್ರಕರಣ ಇತ್ಯರ್ಥಗೊಳಿಸಿ, 144 ಕೋಟಿ ಹಣ ಸಂಗ್ರಹಿಸಿದೆ. 4ನೇ ರಾಷ್ಷ್ರೀಯ ಲೋಕ್ ಅದಾಲತ್‍ನ್ನು ಡಿ.13ರಂದು ನಿಗದಿಪಡಿಸಲಾಗಿದೆ. ಸಾರ್ವಜನಿಕರು ಅಗತ್ಯ ಕಾನೂನಿನ ನೆರವಿಗಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 15100ಕ್ಕೆ ಕರೆ ಮಾಡಬಹುದು ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ ಮಾಹಿತಿ ನೀಡಿದ್ದಾರೆ.