×
Ad

ಶಿವಕುಮಾರ್ ಅವರ ಶಕ್ತಿ, ಶ್ರಮವನ್ನು ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸಬೇಕು : ಕುಣಿಗಲ್ ಶಾಸಕ ಎಚ್.ಡಿ.ರಂಗನಾಥ್

"ಮುಂದಿನ ದಿನಗಳಲ್ಲಿ ಡಿಕೆಶಿ ರಾಜ್ಯದ ಸಿಎಂ ಆಗಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆ"

Update: 2025-10-01 21:57 IST

ಎಚ್.ಡಿ.ರಂಗನಾಥ್

ಬೆಂಗಳೂರು : "ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 140 ಸ್ಥಾನಗಳನ್ನು ಪಡೆದಿರುವುದರ ಹಿಂದೆ ಶಿವಕುಮಾರ್ ಅವರು ಶಕ್ತಿ ಹಾಗೂ ಶ್ರಮವಿದೆ ಎಂದು ಅನೇಕ ನಾಯಕರು ಹೇಳುತ್ತಾರೆ. ಇದನ್ನು ಪಕ್ಷದ ಹೈಕಮಾಂಡ್ ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡಬೇಕು" ಎಂದು ಕುಣಿಗಲ್ ಶಾಸಕ ಎಚ್.ಡಿ.ರಂಗನಾಥ್ ಹೇಳಿದ್ದಾರೆ.

ಬೆಂಗಳೂರಿನ ಬಸವೇಶ್ವರ ನಗರದ ಶಾಸಕರ ನಿವಾಸದಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಬುಧವಾರ ಮಾತನಾಡಿದರು.

"ರಾಜಕೀಯ ಎಂಬುದು ಕೃಷಿಯಿದ್ದಂತೆ. ಹೆಚ್ಚು ಶ್ರಮ ಹಾಕಿದಷ್ಟು ಉತ್ತಮ ರೀತಿಯಲ್ಲಿ ಬೆಳೆ ಬರುತ್ತದೆ. ಕಠಿಣ ಪರಿಶ್ರಮದ ಮೇಲೆ ನಮಗೆ ಹೆಚ್ಚು ನಂಬಿಕೆಯಿದೆ. ಇವರ ಮೇಲೆ ಭಗವಂತನ ಹಾರೈಕೆ, ಜನರ ಪ್ರೀತಿ, ವಿಶ್ವಾಸ, ಹೈಕಮಾಂಡ್ ಆಶೀರ್ವಾದವಿದೆ" ಎಂದರು.

"ಶಿವಕುಮಾರ್ ಅವರಂತೆ ಬೆಳಿಗ್ಗೆ 8 ರಿಂದ ರಾತ್ರಿ 3 ಗಂಟೆಯ ತನಕ ಕೆಲಸ ಮಾಡುವ ನಾಯಕರಿದ್ದರೆ ನನಗೆ ತಿಳಿಸಿ. ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ. ಡಿ.ಕೆ.ಶಿವಕುಮಾರ್ ಅವರು ಒಂದಲ್ಲ ಒಂದು ದಿನ, ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬುದಾಗಿ ನಾವೆಲ್ಲರೂ ಅಪೇಕ್ಷೆ ಪಡುತ್ತೇವೆ. ಆಗುತ್ತಾರೆ ಅಂದುಕೊಂಡಿದ್ದೇವೆ. ಅವರು ಮುಖ್ಯಮಂತ್ರಿಯಾಗುತ್ತಾರೆ" ಎಂದು ಹೇಳಿದರು.

"ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಮಗೆಲ್ಲಾ ರಾಜಕೀಯ ಗುರುಗಳು. ಅವರ ಸಮಾಜಸೇವೆ, ಆಡಳಿತ ವೈಖರಿ, ಅಭಿವೃದ್ಧಿ ಮಾದರಿಗಳನ್ನು ನಡೆ- ನುಡಿಗಳಲ್ಲಿ ನೋಡುತ್ತಾ ಬಂದಿದ್ದೇವೆ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿವೆ" ಎಂದರು.

ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಲೂಟಿ ಮಾಡಿದ್ದೇನೆ:

"ಕುಮಾರಸ್ವಾಮಿ ಅವರೇ, ನಾನು ಕುಣಿಗಲ್ ಜನತೆಯ ಪ್ರೀತಿ ಮತ್ತು ವಿಶ್ವಾಸವನ್ನು ಲೂಟಿ ಮಾಡಿದ್ದೇನೆ. ನೀವು ಹೇಳುವ ಅರ್ಥದ 'ಲೂಟಿ'ಯನ್ನು ನಾನು ಎಂದಿಗೂ ಮಾಡಿಲ್ಲ" ಎಂದು ಕುಣಿಗಲ್ ಶಾಸಕರಾದ ಎಚ್.ಡಿ.ರಂಗನಾಥ್ ಅವರು ತಿರುಗೇಟು ನೀಡಿದರು.

"ಹಿರಿಯರಾದ ನಿಮ್ಮ ಮಾತು ಮತ್ತು ನಡವಳಿಕೆಗಳನ್ನು ನೋಡಿ ನಾವು ಅನುಸರಿಸಬೇಕು. ಆದರೆ ನೀವು ಇದಕ್ಕೆ ವಿರುದ್ಧವಾಗಿ ನಡೆಯುತ್ತಿದ್ದೀರಿ. ಈ ರೀತಿ ಪದ ಬಳಕೆ ಮಾಡುವುದನ್ನು ನಿಲ್ಲಿಸಿ. ನಮ್ಮಂತಹ ಯುವ ಶಾಸಕರ ತೇಜೋವಧೆ ಕೆಲಸ ಮಾಡಬೇಡಿ. ನಾನು ಲೂಟಿ ಮಾಡಿದ್ದರೆ ಇದಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸಿ" ಎಂದು ಸವಾಲು ಹಾಕಿದರು.

ಲೂಟಿ ಪದ ಬಳಕೆ ಸರಿಯಲ್ಲ :

"ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ, ಕುಣಿಗಲ್ ಕ್ಷೇತ್ರವನ್ನು ಬೆಂಗಳೂರು ದಕ್ಷಿಣಕ್ಕೆ ಸೇರಿಸುವ ಹುನ್ನಾರ ಮಾಡಿರುವ ಶಾಸಕ ರಂಗನಾಥ್ ಅವರು ಲೂಟಿ ಎಸಗುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನಾನು ಮಧ್ಯಮ ಕುಟುಂಬದಿಂದ ಬಂದಂತಹ ವ್ಯಕ್ತಿ. ಕುಣಿಗಲ್ ಜನತೆಯ ಆಶೀರ್ವಾದದಿಂದ ಕೆಲಸ ಮಾಡುತ್ತಿದ್ದೇನೆ. ಆದರೆ ಕುಮಾರಸ್ವಾಮಿ ಅವರ ಈ ಆರೋಪ ಕೇಳಿ ನನಗೆ ಬಹಳ ಬೇಸರವಾಯಿತು" ಎಂದರು.

"ಕುಮಾರಸ್ವಾಮಿ ಅವರ ಕುಟುಂಬದವರು ಏನೇ ಮಾಡಿದರು ಅದು ಉತೃಷ್ಟ, ಅದೇ ಬೇರೆಯವರು ಮಾಡಿದರೆ ನಿಕೃಷ್ಟ. ಪ್ರತಿಯೊಂದರಲ್ಲೂ ತಪ್ಪು ಹುಡುಕುತ್ತಾರೆ. ಕುಮಾರಸ್ವಾಮಿ ಅವರು ಎರಡು ಬಾರಿ ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು. ನಾನು ಸಹ ಅವರ ಕಾಲದಲ್ಲಿ ಶಾಸಕನಾಗಿದ್ದೆ. ರಾಜಕೀಯ ಅನುಭವವಿರುವ ವ್ಯಕ್ತಿ ಲೂಟಿ ಎನ್ನುವ ಆರೋಪ ಮಾಡಿರುವುದು ನನಗೆ ವೈಯಕ್ತಿಕವಾಗಿ ಬೇಸರವನ್ನು ಉಂಟು ಮಾಡಿದೆ" ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News