ನಿಗಮ-ಮಂಡಳಿಗಳಿಗೆ 34 ಶಾಸಕರ ನೇಮಕ ರದ್ದು ಕೋರಿ ಅರ್ಜಿ; ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು : ನಿಗಮ-ಮಂಡಳಿಗಳಿಗೆ ಅಧ್ಯಕ್ಷರಾಗಿ 34 ಶಾಸಕರ ನೇಮಕ ಮಾಡಿರುವ ಹಿನ್ನೆಲೆಯಲ್ಲಿ 34 ಶಾಸಕರು ಸೇರಿದಂತೆ 42 ಜನರ ನೇಮಕ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸರಕಾರಕ್ಕೆ ನೋಟಿಸ್ ನೀಡಿದೆ.
ಸೂರಿ ಪಾಯಲ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ, ನ್ಯಾ.ಎಂ.ಐ.ಅರುಣ್ ಅವರಿದ್ದ ವಿಭಾಗೀಯ ಪೀಠ ನೋಟಿಸ್ ಜಾರಿಗೊಳಿಸಿದೆ. ಮಾರ್ಚ್ 18ರೊಳಗೆ ಸರಕಾರದ ಪ್ರತಿಕ್ರಿಯೆ ತಿಳಿಸಲು ಸೂಚನೆ ನೀಡಿದೆ.
'ನಿಗಮ-ಮಂಡಳಿಗೆ ನೇಮಕವಾದವರಿಗೆ ಸಚಿವ ಸ್ಥಾನಮಾನ ನೀಡಲಾಗಿದೆ. ಸಚಿವರ ಸಂಖ್ಯೆ ವಿಧಾನಸಭೆ ಸದಸ್ಯರ ಶೇ.15 ರಷ್ಟನ್ನು ಮೀರುವಂತಿಲ್ಲ. ಸಂವಿಧಾನದ ಆರ್ಟಿಕಲ್ 164(1ಎ) ಉಲ್ಲಂಘಿಸಿ ನೇಮಿಸಲಾಗಿದೆ. ಹೀಗಾಗಿ ನಿಗಮ-ಮಂಡಳಿಗೆ ಶಾಸಕರ ನೇಮಕ ರದ್ದುಗೊಳಿಸಬೇಕು' ಎಂದು ಅರ್ಜಿದಾರರು ಮನವಿ ಮಾಡಿದರು. ವಾದ ಆಲಿದ ಪೀಠ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮಾ.27ಕ್ಕೆ ನಿಗದಿಪಡಿಸಿದೆ.