ಸಿಎಂ ಸಿದ್ದರಾಮಯ್ಯನವರೇ, ನಿಮ್ಮೆಲ್ಲರನ್ನು ಕಿತ್ತೆಸೆಯುವ ಹೋರಾಟ ಮೊಳಕೆಯೊಡೆಯುತ್ತಿದೆ : ಇಂದೂಧರ ಹೊನ್ನಾಪುರ
ಬೆಂಗಳೂರು : ‘ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ವಿವೇಚನೆ ಇರುವವರೆಂದು ನಂಬಿದ್ದೇವೆ. ಈ ನಾಡಿನ ನೆಲ, ಜಲವನ್ನು ಉಳಿಸುವುದು ಅನಿವಾರ್ಯ. ನೀವು ಬದ್ಧತೆಯನ್ನು ತೋರಿಸದಿದ್ದರೆ ನಿಮ್ಮೆಲ್ಲರನ್ನು ಕಿತ್ತೆಸೆಯುವ ಹೋರಾಟದ ಮೊಳಕೆ ಫ್ರೀಡಂ ಪಾರ್ಕಿನಲ್ಲಿ ಹುಟ್ಟುತ್ತಿದೆ’ ಎಂದು ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಗೆ ಸೇರಿದ 13 ಗ್ರಾಮಗಳ 1,777 ಎಕರೆ ಕೃಷಿ ಭೂಮಿ ಸ್ವಾಧೀನವನ್ನು ತಕ್ಷಣ ನಿಲ್ಲಿಸಲು ಒತ್ತಾಯಿಸಿ ರೈತರು ಆರಂಭಿಸಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹೋರಾಟದ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಎಲ್ಲ ಚಳವಳಿಗಳಿಗೂ ಪುನಃಶ್ಚೇತನ ಆಗುವಂತಹ ಹೋರಾಟಗಳ ಮೊಳಕೆ ಇಂದು ಫ್ರೀಡಂ ಪಾರ್ಕಿನಲ್ಲಿ ಚಿಗುರೊಡೆಯುತ್ತಿದೆ. ಎಲ್ಲ ಯುವಜನರು, ಕಾರ್ಮಿಕರು, ರೈತರು, ಮಹಿಳೆಯರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದಲೂ ಈ ಹೋರಾಟಕ್ಕೆ ಜೊತೆಯಾಗುತ್ತಿದ್ದಾರೆ ಎಂದು ಇಂದೂಧರ ಹೊನ್ನಾಪುರ ತಿಳಿಸಿದರು.
ಇದು ಸರಕಾರಕ್ಕೆ ಎಚ್ಚರಿಕೆ. ರೈತರ ವಿಚಾರದಲ್ಲಿ ಬದ್ಧತೆಯ ನಿಲುವನ್ನು ತೆಗೆದುಕೊಳ್ಳಬೇಕು. ರೈತಪರವಾದ ನಿಲುವನ್ನು ಸರಕಾರ ತೆಗೆದುಕೊಳ್ಳುತ್ತದೆ ಎಂದು ನಾವು ನಂಬಿದ್ದೇವೆ. ಆ ನಂಬಿಕೆಯನ್ನು ಉಳಿಸಿಕೊಂಡು ನಮಗೆ ಇಲ್ಲಿಂದ ಮುಕ್ತಿ ಕೊಡಬೇಕು. ತಕ್ಷಣವೇ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟು ರೈತರ ಹಿತ ಕಾಪಾಡಬೇಕು ಎಂದು ಇಂದೂಧರ ಹೊನ್ನಾಪುರ ಒತ್ತಾಯಿಸಿದರು.
ಚನ್ನರಾಯಪಟ್ಟಣ ರೈತ ಹೋರಾಟದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಈ ನಾಡಿನ ಭವಿಷ್ಯ ಕಟ್ಟಿಕೊಡುವ ರೈತಪರ ಹೋರಾಟ ನಡೆಯುತ್ತಿದೆ. ಇದು ನೆಲ, ಜಲ, ಸಂಸ್ಕೃತಿಯನ್ನು ಉಳಿಸುವ ಹೋರಾಟವಾಗಿದೆ. ಇಂದು ರೈತರ ವಿರುದ್ಧ ನಿಂತಿರುವ ಸಿದ್ದರಾಮಯ್ಯ, ಅಂದು ರೈತರ ಪರ ಮಾತಾಡಿದ್ದರು. ಪದೇ ಪದೇ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೀವಿ ಎಂದು ಹೇಳುವ ಅವರು, ಕಾರ್ಪೊ ರೇಟ್‍ಗಳ ಪರ ನಿಲ್ಲುವುದನ್ನು ಬಿಟ್ಟು, ರೈತರ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಉಳಿಸಿಕೊಡಬೇಕು ಎಂದು ಇಂದೂಧರ ಹೊನ್ನಾಪುರ ತಿಳಿಸಿದರು.
ಧರಣಿಯಲ್ಲಿ ಹೋರಾಟಗಾರರಾದ ನೂರ್ ಶ್ರೀಧರ್, ವಿ.ನಾಗರಾಜ್. ಎಸ್.ವರಲಕ್ಷ್ಮೀ, ಅಪ್ಪಣ್ಣ, ಸಿದ್ದನಗೌಡ ಪಾಟೀಲ್, ಟಿ.ಯಶವಂತ, ಪ್ರಭಾ ಎನ್., ಡಿ.ಎಚ್.ಪೂಜಾರ್, ಕುಮಾರ್ ಸಮತಳ ಹಾಗೂ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳ ನೂರಾರು ರೈತರು ಭಾಗವಹಿಸಿದ್ದರು.
ವಿಧಾನಸೌಧ ಕೇಳಿದರೆ ಕೊಡುತ್ತೀರಾ..?: ‘ಕಾರ್ಪೊರೇಟ್ ಕಂಪೆನಿಗಳು ಒಳ್ಳೆಯ ಭೂಮಿಯನ್ನು ಕೇಳುತ್ತಾರೆ. ಅವರು ಕೇಳಿದ ಭೂಮಿಯನ್ನೇ ಕೊಡಬೇಕೆಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳುತ್ತಾರೆ. ಹಾಗಾದರೆ, ನಾಳೆ ಕಾರ್ಪೊರೇಟ್ ಗಳು ವಿಧಾನಸೌಧ ಕೇಳಿದರೆ ಕೊಡುತ್ತೀರಾ? ಏಕೆ ಮೂರ್ಖ ಹೇಳಿಕೆಗಳನ್ನು ಕೊಡುತ್ತಿದ್ದೀರಿ. ಇವತ್ತು ನೀವು ದುಷ್ಟಕೂಟದ ಭಾಗವಾಗಿ, ಕಾರ್ಪೊರೇಟ್ ಕಳ್ಳರ ಜೊತೆ ನಿಂತಿದ್ದೀರಾ. ನೀವು ನಿಜಕ್ಕೂ ಹೊಟ್ಟೆಗೆ ಅನ್ನ ತಿನ್ನುತ್ತೀರಾ?’
-ಇಂದೂಧರ ಹೊನ್ನಾಪುರ ಹಿರಿಯ ಪತ್ರಕರ್ತ