‘ಜಲ ಜೀವನ್ ಮಿಷನ್ ಅನುದಾನ ಬಳಕೆ’ | ಕೇಂದ್ರದ ಆರೋಪ ನಿರಾಧಾರ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಜಲ ಜೀವನ್ ಮಿಷನ್(ಜೆಜೆಎಂ) ಅಡಿಯಲ್ಲಿ ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಅನುದಾನ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಜಲಶಕ್ತಿ ರಾಜ್ಯ ಸಚಿವರು ಮಾಡಿರುವ ಆರೋಪ ನಿರಾಧಾರ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಶನಿವಾರ ಪ್ರಕಟನೆ ಹೊರಡಿಸಿರುವ ಅವರು, ನಿಧಿ ಬಳಕೆಯಲ್ಲಿ ವಿಫಲ ಎಂಬ ಆರೋಪ ಸಂಪೂರ್ಣವಾಗಿ ತಪ್ಪು. 2019-20ರಿಂದ 2024-25ರ ಅವಧಿಗೆ 28,623.89 ಕೋಟಿ ರೂ. ಹಂಚಿಕೆಯಾಗಿದೆ ಎಂದು ಕೇಂದ್ರ ಸರಕಾರ ಹೇಳಿರುವುದು ಸುಳ್ಳು, ವಾಸ್ತವವಾಗಿ ಅಷ್ಟು ಗಾತ್ರದ ಅನುದಾನ ಕೇಂದ್ರ ಸರಕಾರದಿಂದ ಬಿಡುಗಡೆಯಾಗಿರುವುದಿಲ್ಲ. 2025ರ ಫೆ.10ರವರೆಗೆ ಕೇಂದ್ರ ಸರಕಾರ 11,760 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದೆ ಎಂದಿದ್ದಾರೆ.
ಕೇಂದ್ರದಿಂದ ಬಿಡುಗಡೆಯಾದ ಅನುದಾನವನ್ನು ರಾಜ್ಯ ಸರಕಾರವು ಸಂಪೂರ್ಣವಾಗಿ(ಶೇ.99.95) ಬಳಸಿಕೊಂಡಿದೆ. ಆದುದರಿಂದ ರಾಜ್ಯವು ಜೆಜೆಎಂ ನಿಧಿಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂಬ ಆರೋಪವು ಸತ್ಯಕ್ಕೆ ದೂರವಾಗಿದೆ ಮತ್ತು ದಾರಿತಪ್ಪಿಸುವಂತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
* ಒಟ್ಟು ಅನುಮೋದಿತ ಗ್ರಾಮ ಕಾಮಗಾರಿಗಳು: 42,559
* ಈಗಾಗಲೇ ಕೈಗೊಂಡಿರುವ ಕಾಮಗಾರಿಗಳು: 39,098
* ಈಗಾಗಲೇ ಒದಗಿಸಲಾದ ನಲ್ಲಿ ಸಂಪರ್ಕಗಳು: 59.93 ಲಕ್ಷ
* ಬಹು-ಗ್ರಾಮ ಯೋಜನೆಗಳು: 135