ಕೆಪಿಎಸ್‍ಸಿ ಮರು ಪರೀಕ್ಷೆಗೆ ಆದೇಶ ಸ್ವಾಗತಾರ್ಹ : ಕರವೇ ನಾರಾಯಣಗೌಡ
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿನ ಭಾಷಾಂತರದ ಸಮಸ್ಯೆಯಿಂದ ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಹೀಗಾಗಿ, ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ ಬೆನ್ನಲ್ಲೇ ರಾಜ್ಯ ಸರಕಾರ ಕೆಎಎಸ್ ಪರೀಕ್ಷೆಯನ್ನು ಎರಡು ತಿಂಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್‍ಸಿಗೆ ಸೂಚನೆ ನೀಡಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಇದು ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಕ್ಕೆ ಸಿಕ್ಕಿರುವ ಜಯವಾಗಿದೆ. ಈ ಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ತಪ್ಪುಗಳೇ ತುಂಬಿದ್ದರಿಂದ ಕನ್ನಡದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಹೇಳಿದರು.
‘ಮರುಪರೀಕ್ಷೆ ನಡೆಸದೇ ಇದ್ದರೆ ಕೆಪಿಎಸ್‍ಸಿಯಲ್ಲಿ ಯಾವುದೇ ಕೆಲಸ ನಡೆಯಲು ಬಿಡುವುದಿಲ್ಲ ಎಂದು ಹೇಳಿದ್ದರಿಂದ ಈ ಪ್ರತಿಭಟನೆ ಬೇರೆಯೇ ಸ್ವರೂಪ ಪಡೆಯಲಿದೆ ಎಂಬ ಸಂದೇಶ ಸರಕಾರಕ್ಕೆ ತಲುಪಿದ್ದರ ಪರಿಣಾಮ ಈ ಸೂಚನೆ ಬಂದಿದೆ’ ಎಂದು ಹೇಳಿದರು.
ಇನ್‍ಸೈಟ್ಸ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ಮಾತನಾಡಿ, ‘ಮರುಪರೀಕ್ಷೆ ನಡೆಸಲು ಸೂಚನೆ ನೀಡಿರುವುದು ಉತ್ತಮ ನಿರ್ಧಾರ. ಆದರೆ, ಅಷ್ಟು ಮಾಡಿದರೆ ಸಾಲದು. ಕೆಪಿಎಸ್‍ಸಿಯ ಎಲ್ಲ ಭ್ರಷ್ಟ ಸದಸ್ಯರನ್ನು ಕಿತ್ತುಹಾಕಬೇಕು. ಪ್ರಾಮಾಣಿಕತೆ ಮತ್ತು ಅರ್ಹತೆ ಇರುವವರನ್ನು ನೇಮಿಸುವ ಮೂಲಕ ಆಮೂಲಾಗ್ರ ಬದಲಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಟ ಚೇತನ್ ಅಹಿಂಸಾ, ವಕೀಲ ಪ್ರೊ.ಹರೀರಾಮ್, ಪತ್ರಕರ್ತ ಹರ್ಷಕುಮಾರ್ ಕುಗ್ವೆ, ಅಕ್ಕ ಕೋಚಿಂಗ್ ಸೆಂಟರ್‍ನ ಡಾ.ಶಿವಕುಮಾರ್, ಟಾಪರ್ಸ್ ಅಕಾಡಮಿಯ ಶಿವಕುಮಾರ್ ಹುಲಮನಿ, ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ,ಸಣ್ಣೀರಪ್ಪ, ಉಪಾಧ್ಯಕ್ಷ ಡಿ.ಪಿ.ಅಂಜನಪ್ಪ, ಬೆಂಗಳೂರು ನಗರ ಅಧ್ಯಕ್ಷ ಧರ್ಮರಾಜ್, ಮುನಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
‘ಯುಪಿಎಸ್‍ಸಿ ಪರೀಕ್ಷೆಗಳು ಕೂಡ ಇವತ್ತಿಗೂ ಭ್ರಷ್ಟಾಚಾರ ರಹಿತವಾಗಿ ನಡೆಯುತ್ತಿದೆ. ಅದೇ ಮಾದರಿಯಲ್ಲಿ ಕೆಪಿಎಸ್‍ಸಿ ಪರೀಕ್ಷೆಗಳು ನಡೆಯಬೇಕು. ಜೊತೆಗೆ ಯುಪಿಎಸ್‍ಸಿ ಪರೀಕ್ಷೆಯನ್ನು ಕೂಡ ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು. ಕರ್ನಾಟಕ ಲೋಕಸೇವಾ ಆಯೋಗವನ್ನು ಸುದ್ಧೀಕರಣಗೊಳಿಸಬೇಕು. ಈ ಬಾರಿಯ ಪ್ರಶ್ನೆ ಪತ್ರಿಕೆಯಲ್ಲಿ 60ಕ್ಕಿಂತ ಹೆಚ್ಚು ತಪ್ಪು ಅನುವಾದಗಳು ಆಗಿವೆ. ಇದರಿಂದ ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ.
ಮೂಡ್ನಾಕೂಡ್ ಚಿನ್ನಸ್ವಾಮಿ, ಹಿರಿಯ ಕವಿ