ದೇಶದಲ್ಲಿ ಸಮಾನತೆ ಅಳಿಸಬೇಕೆಂಬ ದುರುದ್ದೇಶ ಬಿಜೆಪಿಗಿದೆ : ಕಿಮ್ಮನೆ ರತ್ನಾಕರ
ಬೆಂಗಳೂರು : ಸಂವಿಧಾನದ ಪೀಠಿಕೆಯಿಂದ ಜಾತ್ಯಾತೀತ ಪದ ತೆಗೆದುಹಾಕಲು ಹೊರಟಿರುವ ಬಿಜೆಪಿಯವರಿಗೆ ಶ್ರೇಣಿಕೃತ ವ್ಯವಸ್ಥೆ ಉಳಿಸಿ ಸಮಾನತೆಯನ್ನು ಅಳಿಸಿಹಾಕಬೇಕೆಂಬ ದುರುದ್ದೇಶವಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಆರೋಪಿಸಿದ್ದಾರೆ.
ಶನಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗರು ಒಕ್ಕೂಟ ವ್ಯವಸ್ಥೆ ಬೇಡ ಎಂದು ಹೇಳುತ್ತಾರೆ. ದೇಶದಲ್ಲಿ ಭಾಷಾವಾರು ಪ್ರಾಂತ್ಯಗಳೇ ಹೆಚ್ಚು ಇರುವುದು. ಇಲ್ಲಿರುವ ಸರಕಾರಗಳನ್ನೇ ತೆಗೆದುಹಾಕಬೇಕು ಎನ್ನುವುದೇ ಅವರ ಹುನ್ನಾರ. ನಾವು ಈ ಹುನ್ನಾರದ ವಿರುದ್ದ ಇದ್ದೇವೆ ಎಂದರು.
2015ರಲ್ಲಿ ತಾವು ಶಿಕ್ಷಣ ಸಚಿವನಾಗಿದ್ದಾಗ ತಂದಂತಹ ಐದನೇ ತರಗತಿ ತನಕ ಕನ್ನಡ ಮಾಧ್ಯಮ ಮಾಡಬೇಕು ಎನ್ನುವ ಬಿಲ್ ಇನ್ನೂ ರಾಷ್ಟ್ರಪತಿ ಭವನದಲ್ಲೇ ಉಳಿದುಕೊಂಡಿದೆ. ಈ ಬಿಜೆಪಿಯವರು ಹಿಂದಿ ತರಬೇಕು ಸಂಸ್ಕೃತ ಉಳಿಬೇಕು ಎಂದು ಮಸಲತ್ತು ಮಾಡುತ್ತಿದ್ದಾರೆ. ನಮಗೆ ಕನ್ನಡ ಬೇಡ ಎನ್ನುವುದನ್ನು ಅವರುಗಳು ನೇರವಾಗಿ ಹೇಳುವ ಧೈರ್ಯವಿದೆಯೇ? ಎಂದು ಕಿಮ್ಮನೆ ರತ್ನಾಕರ ಪ್ರಶ್ನಿಸಿದರು.
ರಾಜ್ಯದ ವಿರೋಧ ಪಕ್ಷದ ನಾಯಕರು, ಬಿಜೆಪಿ ರಾಜ್ಯಾಧ್ಯಕ್ಷರು ಓದುವುದೇ ಇಲ್ಲ ಎನಿಸುತ್ತದೆ. ತಲೆಯಲ್ಲಿ ಜ್ಞಾನ ಎನ್ನುವುದೇ ಇಲ್ಲ. ಅವರುಗಳುಗಳಿಗೆ ನಾವೇ ಪುಸ್ತಕ ಕಳುಹಿಸಿಕೊಡಬೇಕೋ ಏನೋ? ಚಿಂತನಾಗಂಗಾ ಎನ್ನುವ ಸಂಘದ ಪುಸ್ತಕದಲ್ಲಿ ಒಂದೇ ದೇಶ, ಭಾಷೆ, ಆಚರಣೆ ಇರಬೇಕು ಎಂದು ಒತ್ತಿ ಹೇಳಲಾಗಿದೆ ಎಂದು ಕಿಮ್ಮನೆ ರತ್ನಾಕರ ತಿಳಿಸಿದರು.
ಕಾಂಗ್ರೆಸ್ ಪಕ್ಷ ತಂದಿರುವಂತಹ ತಿದ್ದುಪಡಿಗಳು ಸಂವಿಧಾನದ ಆಶಯಕ್ಕೆ ಧಕ್ಕೆ ತಂದಿಲ್ಲ. ದೇಶದ ಹಿತಾಸಕ್ತಿಗೆ ಅನುಗುಣವಾಗಿ ತಂದಿರುವ ತಿದ್ದುಪಡಿಗಳು. ಮೀಸಲಾತಿ ಬಳಸಿಕೊಂಡು ಈ ಬಿಜೆಪಿಯವರು ಜನಪ್ರತಿನಿಧಿಗಳಾಗಿದ್ದರೆ ಅಥವಾ ಅಧಿಕಾರಿಗಳಾಗಿದ್ದರೆ ನಿಮಗೆ ನೈತಿಕತೆ ಇದ್ದರೆ ದಯವಿಟ್ಟು ರಾಜೀನಾಮೆ ನೀಡಿ ಇದರ ವಿರುದ್ದ ಹೋರಾಟ ಮಾಡಿ. ಛಲವಾದಿ ನಾರಾಯಣಸ್ವಾಮಿ ಅವರು ರಾಜೀನಾಮೆ ನೀಡಿ ಚಿಂತನಗಂಗಾ ಪರವಾಗಿ ಹೋರಾಟ ಮಾಡಿ ಎಂದು ಕಿಮ್ಮನೆ ರತ್ನಾಕರ ಹೇಳಿದರು.
ಜಾತೀಯತೆ ಮಾಡಿದಷ್ಟು ಗುಂಪುಗಾರಿಕೆಯನ್ನು ಮೀಸಲಾತಿ ಮಾಡುವುದಿಲ್ಲ. ಅಸಮಾನತೆ ಇರುವ ತನಕ ಮೀಸಲಾತಿ ಇದ್ದೇ ಇರುತ್ತದೆ. ರಕ್ತದಿಂದ ಜಾತಿ ಹರಿಯುತ್ತದೆ. ಮನುಷ್ಯನ ನಡುವಿನ ಜಾತಿ ಅಂತರ ತೆಗೆದುಹಾಕಬೇಕು ಎನ್ನುವುದು ನಮ್ಮ ನಿಲುವು. ಜಾತ್ಯಾತೀತತೆ ಎಂದರೆ ಈ ದೇಶದ ಎಲ್ಲ ಜಾತಿ, ಧರ್ಮಗಳಿಗೆ ಗೌರವ ನೀಡುತ್ತಾ ಒಟ್ಟಾಗಿ ತೆಗೆದುಕೊಂಡು ಹೋಗುವುದು. ಕಾಂಗ್ರೆಸ್ಸಿಗನಾಗಿ ನಾನು ಈ ಪ್ರಕ್ರಿಯೆಗೆ ಗೌರವ ನೀಡಬೇಕಾಗುತ್ತದೆ ಎಂದು ಕಿಮ್ಮನೆ ರತ್ನಾಕರ ತಿಳಿಸಿದರು.
ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮಾತನಾಡಿ, ಬಿಜೆಪಿಯ 45 ವರ್ಷಗಳ ಇತಿಹಾಸದಲ್ಲಿ ಕೇವಲ ಇಬ್ಬರು ಬೇರೆ ಜಾತಿಯವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅದರಲ್ಲಿ ಬಂಗಾರು ಲಕ್ಷಣ್ ಎನ್ನುವ ದಲಿತರನ್ನು ಒಂದು ವರ್ಷಕ್ಕೆ ಮಾತ್ರ ಮಾಡಲಾಯಿತು. ಇಂತಹ ಬಿಜೆಪಿಗೆ ಇದ್ದಕ್ಕಿದ್ದಂತೆ ದಲಿತರ ಮೇಲೆ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಪ್ರೀತಿ ಉಕ್ಕಿ ಹರಿಯುತ್ತದೆ ಎಂದರು.