ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ದುರುಪಯೋಗದ ದಾಖಲೆಗಳು ಕೇಂದ್ರ ಸರಕಾರಕ್ಕೆ ಸಲ್ಲಿಕೆ: ಲೆಹರ್ ಸಿಂಗ್
ಬೆಂಗಳೂರು : ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ದುರುಪಯೋಗ, ದುರ್ಬಳಕೆ ಮತ್ತು ವಂಚನೆ ಆರೋಪಗಳನ್ನು ಬೆಂಬಲಿಸುವ ಸುಮಾರು 40 ಸಾವಿರ ಪುಟಗಳ ದಾಖಲೆಗಳನ್ನು ಕೇಂದ್ರ ಸರಕಾರಕ್ಕೆ ಸಲ್ಲಿಕೆ ಮಾಡುವುದಾಗಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2012ರಲ್ಲಿ ಉಪ ಲೋಕಾಯುಕ್ತ ನ್ಯಾ.ಎನ್.ಆನಂದ್ ನೇತೃತ್ವದಲ್ಲಿ ರಾಜ್ಯ ಸರಕಾರ ಸ್ಥಾಪಿಸಿದ್ದ ವಿಚಾರಣಾ ಆಯೋಗಕ್ಕೆ ಕಳುಹಿಸಲಾದ ದಾಖಲೆಗಳು ಇವು. ಆರ್‌ಟಿಐ ಮೂಲಕ ಈ ಎಲ್ಲಾ ದಾಖಲೆಗಳನ್ನು ಪಡೆಯಲಾಗಿದೆ ಎಂದು ಹೇಳಿದರು.
ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಅಧಿಕಾರದಲ್ಲಿದವರು ಮತ್ತು ಪ್ರಭಾವಿಗಳು ವಕ್ಫ್ ಭೂಮಿಯನ್ನು ಹೇಗೆ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ಈ ದಾಖಲೆಗಳಿಂದ ತಿಳಿದು ಬರುತ್ತದೆ. ಅಲ್ಪಸಂಖ್ಯಾತ ಸಮುದಾಯದ ಹಿತಾಸಕ್ತಿಗಳ ವಿಷಯದಲ್ಲಿ ಸಂಪೂರ್ಣವಾಗಿ ಕಳೆದ ಕೆಲವು ದಶಕಗಳಲ್ಲಿ ರಾಜಿ ಮಾಡಿಕೊಳ್ಳಲಾಗಿದೆ. ಅಲ್ಪಸಂಖ್ಯಾತರು ಯಾರನ್ನು ತಮ್ಮ ರಕ್ಷಕರು ಎಂದು ನಂಬಿದ್ದಾರೋ ಅವರಿಂದಲೇ ವಂಚನೆಗೊಳಗಾಗಿದ್ದಾರೆ ಎಂದು ಲೆಹರ್ ಸಿಂಗ್ ಸಿರೋಯಾ ತಿಳಿಸಿದರು.
ಹೆಸರುಗಳನ್ನು ತೆಗೆದುಕೊಂಡು ಸಂಚಲನ ಮೂಡಿಸುವುದರಲ್ಲಿ ನನಗೆ ಆಸಕ್ತಿಯಿಲ್ಲ. ನಾನು ಸ್ವತಃ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವನಾಗಿರುವುದರಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯ ಕೊಡಿಸಲು ಬಯಸುತ್ತೇನೆ. ಆದುದರಿಂದ, ಈ ದಾಖಲೆಗಳನ್ನು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮತ್ತು ವಕ್ಫ್ ಕಾನೂನು ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೆ ಸೋಮವಾರ ಆರಂಭವಾಗುವ ಸಂಸತ್ ಅಧಿವೇಶನ ಸಂದರ್ಭದಲ್ಲಿ ಹಸ್ತಾಂತರಿಸಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರದ ವಕ್ಫ್ ಶಾಸನದ ವಿರುದ್ಧ ರಾಜ್ಯ ಸರಕಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲು ಯೋಜಿಸುತ್ತಿದೆ ಎಂಬ ಮಾಹಿತಿಯಿದೆ. ಕಾಂಗ್ರೆಸ್ ಪಕ್ಷ ತನ್ನ ಕೆಲವು ಪ್ರಭಾವಿ ಸಹದ್ಯೋಗಿಗಳು ಮತ್ತು ಸ್ನೇಹಿತರನ್ನು ತನಿಖೆಯಿಂದ ರಕ್ಷಿಸಲು ನಿರ್ಣಯ ಅಂಗೀಕರಿಸಲು ಮುಂದಾಗಿದೆ ಎಂದು ಲೆಹರ್ ಸಿಂಗ್ ಸಿರೋಯಾ ಟೀಕಿಸಿದರು.
ನ್ಯಾ.ಎನ್.ಆನಂದ್ 2016ರ ಮಾರ್ಚ್‍ನಲ್ಲಿ ರಾಜ್ಯ ಸರಕಾರಕ್ಕೆ ವಕ್ಫ್ ಭೂಮಿಗಳ ಕುರಿತು ಬಹಳ ಪ್ರಮುಖವಾದ ವಿಚಾರಣಾ ವರದಿಯನ್ನು ಸಲ್ಲಿಸಿತ್ತು. ರಾಜ್ಯದಲ್ಲಿ ದಶಕಗಳಿಂದ ವಕ್ಫ್ ಆಸ್ತಿಗಳನ್ನು ರಕ್ಷಿಸಲು ಕಾನೂನು ಬದ್ಧವಾಗಿ ಅಧಿಕಾರ ಹೊಂದಿರುವವರು ಮಾಡಿರುವ ಕ್ರಿಮಿನಲ್ ದುರುಪಯೋಗ, ಕಬಳಿಕೆ, ಅಕ್ರಮವಾಗಿ ಒಳಬಾಡಿಗೆ(ಸಬ್ ಲೀಸ್) ಮತ್ತು ಸಂಪೂರ್ಣ ಅತಿಕ್ರಮಣವನ್ನು ವಿವರವಾಗಿ ಈ ಉನ್ನತಮಟ್ಟದ ವಿಚಾರಣಾ ವರದಿ ದಾಖಲಿಸಿದೆ ಎಂದು ಅವರು ಹೇಳಿದರು.
ಈ ವರದಿ ಸರಕಾರದ ದಾಖಲೆಗಳಲ್ಲಿ ಅಥವಾ ಸಾರ್ವಜನಿಕವಾಗಿ ಇಲ್ಲ. ಉದ್ದೇಶಪೂರ್ವಕವಾಗಿ ಅದನ್ನು ಕಣ್ಮರೆ ಮಾಡಲಾಗಿದೆ. ವರದಿಯು ತುಂಬಾ ಗಂಭೀರ ಆರೋಪ ಹೊರಿಸುವಂತಿದೆ. ರಾಜಕೀಯ ಮತ್ತು ನಾಗರಿಕ ಸಮಾಜದಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರ ಪರವಾಗಿ ನಿರಂತರವಾಗಿ ಪ್ರತಿನಿಧಿಸಲು ಪ್ರಯತ್ನಿಸುವವರು ಯಾವ ರೀತಿ ದ್ರೋಹ ಮಾಡಿದ್ದಾರೆ ಎಂಬುದು ಈ ವರದಿಯಲ್ಲಿದೆ ಎಂದು ಅವರು ದೂರಿದರು.
ಸಿದ್ದರಾಮಯ್ಯ ಸರಕಾರಕ್ಕೆ ವಕ್ಫ್ ಆಸ್ತಿಗಳ ಅತಿಕ್ರಮಣ ಮತ್ತು ಅಲ್ಪಸಂಖ್ಯಾತರ ಹಿತಾಸಕ್ತಿಯ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ 2016ರಲ್ಲಿ ಈ ವಿಚಾರಣಾ ಆಯೋಗವನ್ನು ರಾತ್ರೋರಾತ್ರಿ ವಿಸರ್ಜನೆ ಮಾಡಿದ್ದಾದರೂ ಏಕೆ? ಇತ್ತೀಚಿನ ದಿನಗಳಲ್ಲಿ ಬಡ ರೈತರಿಂದ ವಕ್ಫ್ ಭುಮಿ ಅತಿಕ್ರಮಣವನ್ನು ತೆರವುಗೊಳಿಸಲು ಪ್ರಯತ್ನಿಸಿದ ಈ ಸರಕಾರ ವಕ್ಫ್ ಆಸ್ತಿಯ ಲೂಟಿಯಲ್ಲಿ ತೊಡಗಿರುವ, ಅಲ್ಪಸಂಖ್ಯಾತ ಸಮುದಾಯದ ಒಳಗೆ ಮತ್ತು ಹೊರಗೆ, ತನ್ನದೇ ಪಕ್ಷದೊಳಗಿನ ಶ್ರೀಮಂತರು ಮತ್ತು ಪ್ರಭಾವಶಾಲಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಏಕೆ ಆಸಕ್ತಿ ಹೊಂದಿಲ್ಲ ಎಂದು ಲೆಹರ್ ಸಿಂಗ್ ಸಿರೋಯಾ ಪ್ರಶ್ನಿಸಿದರು.
ರಾಜ್ಯ ಸರಕಾರ ಈಗ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲೆ ನ್ಯಾ.ಆನಂದ್ ಸಲ್ಲಿಸಿರುವ ವರದಿಯನ್ನು ಮಂಡಿಸಬೇಕು ಎಂದು ಒತ್ತಾಯಿಸಿದ ಅವರು, ಸಿದ್ದರಾಮಯ್ಯ ಸರಕಾರದ ಮೊದಲ ಅವಧಿಯಲ್ಲಿ ಒಬ್ಬ ಸಚಿವರ ಬಳಿಗೆ ಹೋಗಿದ್ದ ಗುಲ್ಬರ್ಗಾ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಕಡತ ಇನ್ನೂ ಇಲಾಖೆಗೆ ಹಿಂತಿರುಗಿಲ್ಲ ಎಂದು ತಿಳಿದು ಬಂದಿದೆ. ಆ ಕಡತವನ್ನು ಪತ್ತೆ ಹಚ್ಚಿ ಇಲಾಖೆಗೆ ಹಿಂತಿರುಗಿಸುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.