×
Ad

ಕರ್ನಾಟಕಕ್ಕೆ ಬರುವ ಎಲ್ಲ ಉತ್ಪನ್ನಗಳ ಮೇಲೆ ಕನ್ನಡವಿರಲಿ : ನಾರಾಯಣಗೌಡ

Update: 2025-02-01 23:17 IST

ಬೆಂಗಳೂರು : ಕರ್ನಾಟಕ ರಾಜ್ಯಕ್ಕೆ ಬರುವ ಎಲ್ಲ ಉತ್ಪನ್ನಗಳ ಮೇಲೆ ಕನ್ನಡವಿರಬೇಕು. ಕರ್ನಾಟಕಕ್ಕೆ ಬರುವ ಏಜೆನ್ಸಿಗಳು ಕನ್ನಡಿಗರಿಗೆ ಸಿಗಬೇಕು. ಕನ್ನಡಿಗರು ಉದ್ಯಮ ಕಟ್ಟಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.

ಶನಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆದ ‘ಮಹಾ ಸಂಘರ್ಷ ಯಾತ್ರೆ’ಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನರು ಬದುಕಿಗಾಗಿ ಮುಂಬೈ, ಗೋವಾ, ಹೈದ್ರಾಬಾದ್‍ಗೆ ಹೋಗುತ್ತಾರೆ. ಕನ್ನಡಿಗರು ಇನ್ನೆಲ್ಲಿಗೆ ಹೋಗಬೇಕು. ನಮ್ಮ ಬದುಕನ್ನು ನಮ್ಮ ನೆಲದಲ್ಲೇ ಕಟ್ಟಿಕೊಳ್ಳಬೇಕು. ರಾಜ್ಯದ ಎಲ್ಲ ಏಜೆನ್ಸಿಗಳು ಕನ್ನಡಿಗರಿಗೆ ಸಿಗಬೇಕು. ಎಲ್ಲ ಬ್ಯಾಂಕ್‍ಗಳಲ್ಲಿ ಕನ್ನಡಿಗರೇ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ರೈತನೊಬ್ಬ ಬ್ಯಾಂಕ್‍ಗೆ ಹೋದಾಗ ಬ್ಯಾಂಕ್ ಮ್ಯಾನೇಜರ್ ಹಿಂದಿ ಕಲಿತುಕೊಂಡು ಬರಲು ಹೇಳಿದ್ದ. ನಮ್ಮ ರಾಜ್ಯಕ್ಕೆ ಬಂದು ಅವರು ಕನ್ನಡ ಕಲಿಯಬೇಕು. ನಾವು ಅವರ ಭಾಷೆ ಕಲಿಯುವುದು ಅಲ್ಲ. ಇದನ್ನು ನಾವು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಕನ್ನಡದ ವಿಚಾರದಲ್ಲಿ ನಮಗೆ ಎದುರು ಬರಬೇಡಿ ಯುದ್ಧ ಟ್ಯಾಂಕರಿನಂತೆ ಅಪ್ಪಚ್ಚಿಯಾಗುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕೊಡಬೇಕೆಂದು ಸಂಪುಟ ತೀರ್ಮಾನ ತೆಗೆದುಕೊಂಡಾಗ ಮೋಹನ್‍ದಾಸ್ ಪೈ ವಿರೋಧಿಸಿ, ಕನ್ನಡಿಗರಿಗೆ ಕೆಲಸ ಕೊಡಿ ಎಂದು ಹೇಳಿದರೆ ನಾವು ಪಕ್ಕದ ರಾಜ್ಯಕ್ಕೆ ಹೋಗುತ್ತೇವೆಂದು ಹೇಳಿದ್ದರು. ಹೋಗಿ ಸಾಯಿ! ಯಾರು ಬೇಡ ಅಂದರು, ನೀವು ಇಲ್ಲವೆಂದರೆ ಕನ್ನಡಿಗರು ಉಪವಾಸ ಇರುತ್ತಾರೆಯೇ? ಒಂದೆರೆಡು ಕೋಟಿ ಹಣದಿಂದ ಸಾವಿರಾರು ಕೋಟಿ ಹಣ ಮಾಡಲಾಗಿದೆ. ಮೋಹನ್‍ದಾಸ್ ಪೈ ನೀನೂ ಹೋಗು ನಿನ್ನೊಂದಿಗೆ ಯಾರಾದರೂ ಬಂದರೆ ಅವರನ್ನು ಕರೆದುಕೊಂಡು ಹೋಗು ಎಂದು ಎಚ್ಚರಿಸಿದರು.

ಸಿದ್ದರಾಮಯ್ಯ ಅವರಿಗೆ ಕನ್ನಡದ ಬಗ್ಗೆ ಅಲ್ಪಸ್ವಲ್ಪ ನೈಜವಾದ ಕಾಳಜಿ ಇದೆ ಎನ್ನುವುದಾದರೆ, ಎಲ್ಲ ಉತ್ಪನ್ನಗಳ ಮೇಲೆ ಕನ್ನಡ ಇರುವುದು, ಉತ್ಪನ್ನ ಏಜೆನ್ಸಿಗಳು ಕನ್ನಡಿಗರಿಗೆ ಸಿಗಬೇಕು. ಬ್ಯಾಂಕ್‍ನ ಉದ್ಯೋಗಗಳು ಕನ್ನಡಿಗರಿಗೆ ಸಿಗಬೇಕು ಎನ್ನುವ ಕಾಯ್ದೆಯನ್ನು ಜಾರಿಗೊಳಿಸಿ, ಅಧಿಕಾರ ಶಾಶ್ವತ ಅಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರವೇ ಗೌರವಾಧ್ಯಕ್ಷ ಅರುಣಾಚಲಂ, ಸುರೇಶ್, ಕನ್ನಡಸತ್ಯ ರಂಗಣ್ಣ, ತಿಮ್ಮೇಶ್, ಆನಂದ ಮೊದಲಿಗೆರೆ, ರಾಜ್‍ಗುರು ಹೊಸಕೋಟೆ ಮತ್ತಿತರರು ಹಾಜರಿದ್ದರು.

ಪಾಲು ಸಿಗದಿದ್ದರೆ ಒಕ್ಕೂಟ ಧಿಕ್ಕರಿಸುತ್ತೇವೆ: ‘ಬಜೆಟ್ ವಿಚಾರದಲ್ಲಿ ಕೇಂದ್ರ ಸರಕಾರದಿಂದ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ರೈಲ್ವೆ, ಹಣಕಾಸು ಇಲಾಖೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಅನ್ಯಾಯವಾಗುತ್ತಿದೆ. ಭಾರತದಲ್ಲಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯವಾದರೂ, ನಮ್ಮ ತೆರಿಗೆಯಲ್ಲಿ ಮರಳಿ ಕೊಡುವುದು ಅಲ್ಪ ಪ್ರಮಾಣ ಮಾತ್ರ. ಸುಮಾರು ವರ್ಷದಿಂದ ಕೇಂದ್ರದ ಗಮನ ಸೆಳೆದರೂ ಅನ್ಯಾಯ ನಿಂತಿಲ್ಲ. ಇದೇ ರೀತಿ ಅನ್ಯಾಯ ಮಾಡಿದರೆ, ಆದಿಕವಿ ಪಂಪ ಹೇಳಿದಂತೆ ಕನ್ನಡ ದೇಶದೋಳ್ ಎಂದಂತೆ ನಾವು ಭಾರತ ಒಕ್ಕೂಟ ಧಿಕ್ಕರಿಸಿ, ಕರ್ನಾಟಕ ದೇಶದೋಳ್ ಎಂದು ಹೇಳಬೇಕಾಗುತ್ತದೆ’

-ಟಿ.ಎ.ನಾರಾಯಣಗೌಡ ಕರವೇ ರಾಜ್ಯಾಧ್ಯಕ್ಷ 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News