ಪೊಲೀಸರ ನಿರ್ಬಂಧದ ನಡುವೆಯೇ ‘ನ್ಯಾಯಕ್ಕಾಗಿ ಹಣತೆ ಹಚ್ಚೋಣ’ ಆಂದೋಲನ
ಬೆಂಗಳೂರು : ಧರ್ಮಸ್ಥಳ ದೌರ್ಜನ್ಯ ಪ್ರಕರಣಗಳ ಕುರಿತು ಸತ್ಯ ಬೆಳಕಿಗೆ ಬರಲಿ ಎಂಬ ಆಶಯದೊಂದಿಗೆ ಬೆಳಕಿನ ಹಬ್ಬ ದೀಪಾವಳಿ ದಿನದಂದು ‘ನ್ಯಾಯಕ್ಕಾಗಿ ಹಣತೆ ಹಚ್ಚೋಣ’ ಆಂದೋಲನವನ್ನು ಪೊಲೀಸರ ನಿರ್ಬಂಧದ ನಡುವೆಯೇ ನಡೆಸಲಾಯಿತು.
ಗುರುವಾರ ನಗರದ ಬಸವಣ್ಣ ಪುತ್ಥಳಿ ಸಮೀಪ ‘ನ್ಯಾಯಕ್ಕಾಗಿ ನಾವು’ ಸಂಘಟನೆಯ ವತಿಯಿಂದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮೇಣದ ಬತ್ತಿಯನ್ನು ಬೆಳಗಿಸಿ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ, ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.
ಆರೆಸ್ಸೆಸ್ ಪಥಸಂಚಲನಕ್ಕೆ ಅವಕಾಶವನ್ನು ನೀಡುವ ಪೊಲೀಸರು, ಹೈಕೋರ್ಟ್ ಆದೇಶದ ನೆಪದಲ್ಲಿ ನ್ಯಾಯಯುತ ಪ್ರತಿಭಟನೆಗಳಿಗೆ ನಿರ್ಬಂಧ ಹೇರಿದ್ದಾರೆ. ನಾವು ಪೊಲೀಸ್ ರಾಜ್ಯದಲ್ಲಿದ್ದೇವೆಯೋ ಅಥವಾ ಪ್ರಜಾಪ್ರಭುತ್ವ ರಾಜ್ಯದಲ್ಲಿ ಇದ್ದೇವೆಯೋ ಎಂದು ಹೋರಾಟಗಾರರು ಪ್ರಶ್ನಿಸಿದರು.
ಧರ್ಮಸ್ಥಳದಲ್ಲಿ ಈ ಹಿಂದೆ ನಡೆದಿರುವ ಮಹಿಳೆಯರ ಮತ್ತು ನಾಗರಿಕರ ಮೇಲಿನ ಎಲ್ಲ ದೌರ್ಜನ್ಯ, ಅಪಹರಣ, ನಾಪತ್ತೆ, ಅಸಹಜ ಸಾವು, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನೂ ಎಸ್‌ಐಟಿ ತನಿಖೆ ವ್ಯಾಪ್ತಿಗೆ ತರಬೇಕೆಂದು ಆಗ್ರಹಿಸಿ ನವೆಂಬರ್ 1ರಂದು ‘ಸಹಿ ಸಂಗ್ರಹ’ ಆಂದೋಲನವನ್ನು ಆರಂಭಿಸುತ್ತಿದ್ದೇವೆ ಎಂದು ಹೋರಾಟಗಾರರು ತಿಳಿಸಿದರು.
ನವೆಂಬರ್ ತಿಂಗಳಿನಲ್ಲಿ ರಾಜ್ಯದ ಮೂಲೆಮೂಲೆಗಳಲ್ಲಿ ಜಾಗೃತಿ ಅಭಿಯಾನವನ್ನು ನಡೆಸಿ, ಡಿ.10ರಂದು ‘ವಿಶ್ವ ಮಾನವ ಹಕ್ಕುಗಳ ದಿನ’ದ ಸಂದರ್ಭದಲ್ಲಿ ಬೃಹತ್ ಮಹಿಳಾ ಸಮಾವೇಶವನ್ನು ಹಮ್ಮಿಕೊಳ್ಳಲಿದ್ದೇವೆ. ಅದರಲ್ಲಿ ದೇಶದ ವಿವಿಧ ಭಾಗಗಳಿಂದ ಮಹಿಳಾ ಸಂಘಟನೆಗಳ ಹಿರಿಯ ನಾಯಕಿಯರೂ ಮತ್ತು ಚಿಂತಕಿಯರೂ ಪಾಲ್ಗೊಂಡು ನ್ಯಾಯಕ್ಕಾಗಿ ಆಗ್ರಹಿಸಲಿದ್ದೇವೆ ಎಂದು ತಿಳಿಸಿದರು.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಎಲ್ಲ ಕೊಲೆ, ಅತ್ಯಾಚಾರ ಪ್ರಕರಣಗಳನ್ನು ಎಸ್‌ಐಟಿಯು ಸಮಗ್ರವಾಗಿ ತನಿಖೆ ನಡೆಯಲಿ ಮತ್ತು ತಾರ್ಕಿಕ ಅಂತ್ಯ ಮುಟ್ಟುವ ತನಕ ಅಬಾಧಿತವಾಗಿ ಸಾಗಲಿ ಎಂಬ ಆಗ್ರಹವನ್ನೂ ಪರಿಗಣಿಸಿ, ಅದಕ್ಕೆ ಅಗತ್ಯವಾದ ಆದೇಶಗಳನ್ನು ಹೊರಡಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.