×
Ad

ಜಿಲ್ಲಾ ಆಸ್ಪತ್ರೆಗಳಲ್ಲಿ ಮಾನಸಿಕ ಅಸ್ವಸ್ಥರ ಆರೈಕೆ ಕೇಂದ್ರ ಸ್ಥಾಪನೆ

Update: 2025-06-06 22:58 IST

ಬೆಂಗಳೂರು : ಸರಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ರಾಜ್ಯದ ಎಲ್ಲ ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಮಾನಸಿಕ ಅಸ್ವಸ್ಥರ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲು ಸರಕಾರ ಕ್ರಮ ವಹಿಸುತ್ತಿದ್ದು, ಇದಕ್ಕಾಗಿ ಆರು ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.

ಗುರುವಾರ ಆರೋಗ್ಯ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಚಿತ್ರದುರ್ಗ, ಯಾದಗಿರಿ, ಕೋಲಾರ ಮತ್ತು ಬೀದರ್ ಜಿಲ್ಲೆಗಳಲ್ಲಿ ‘ಆಲದಮರ ಫೌಂಡೇಶನ್’ ವತಿಯಿಂದ ಆರೈಕೆ ಕೇಂದ್ರಗಳನ್ನು ಹಾಗೂ ಉಳಿದ 27 ಜಿಲ್ಲೆಗಳ ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಆರೈಕೆ ಕೇಂದ್ರಗಳನ್ನು ಅನುಮೋದನೆ ನೀಡಿ ಆದೇಶಿಸಿದ್ದಾರೆ.

ಆರೈಕೆ ಕೇಂದ್ರಗಳನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅರ್ಹ ಮತ್ತು ಅನುಭವಿ ಎನ್‍ಜಿಒಗಳಿಂದ ಆಸಕ್ತರನ್ನು ಆಹ್ವಾನಿಸಬೇಕು. ಜಿಲ್ಲಾಮಟ್ಟದ ಸಮಿತಿಗಳು ಪೂರ್ವನಿರ್ಧಾರಿತ ಮಾನದಂಡಗಳ ಆಧಾರದ ಮೇಲೆ ಸ್ಥಳೀಯ ಎನ್‍ಜಿಒಗಳನ್ನು ಪರೀಕ್ಷಿಸಿ ಆಯ್ಕೆ ಪಟ್ಟಿ ಸಿದ್ಧಪಡಿಸಬೇಕು ಎಂದು ಅವರು ವಿವರಿಸಿದ್ದಾರೆ.

ಆಯ್ಕೆ ಪಟ್ಟಿ ಮಾಡಿದ ಅರ್ಜಿಗಳನ್ನು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಆಯ್ಕೆ ಸಮಿತಿಗೆ ಕಳುಹಿಸಬೇಕು. ಅಂತಿಮವಾಗಿ ಆಯ್ಕೆಯಾದ ಎನ್‍ಜಿಒಗಳಿಗೆ ಜಿಲ್ಲಾಮಟ್ಟದ ಆಸ್ಪತ್ರೆಗಳ ಸಹಯೋಗದೊಂದಿಗೆ ಇಸಿಆರ್‍ಸಿ ಸೇವೆಗಳನ್ನು ನಿರ್ವಹಿಸಲು ಮತ್ತು ಕಾರ್ಯಗತಗೊಳಿಸಲು ಅಧಿಕಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಔಷಧ ಮತ್ತು ವೈದ್ಯಕೀಯ ಆರೈಕೆ ಲಭ್ಯವಿರುವ ಆಸ್ಪತ್ರೆ ಮೂಲಸೌಕರ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಈ ಯೋಜನೆಗೆ ಮುಂದೆ ಯಾವುದೇ ಹೆಚ್ಚುವರಿ ಆರ್ಥಿಕ ಮತ್ತು ಮಾನವ ಸಂಪನ್ಮೂಲದ ಕೋರಿಕೆ ಇದ್ದರೆ, ಸರಕಾರಕ್ಕೆ ಸಲ್ಲಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News